ಕುಶಾಲನಗರ ಜ.10 NEWS DESK : ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ತಾಲ್ಲೂಕಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕಾಲ ಏರ್ಪಡಿಸಿರುವ
ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು. 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ 4 ದಿನಗಳ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಕುಶಾಲನಗರದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಕುಶಾಲನಗರ ಪುರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಚಾಲನೆ ನೀಡಿದರು. ಪ್ರವಾಸಿ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ, ವಿದ್ಯಾರ್ಥಿ ಜೀವನದಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಪ್ರವಾಸಗಳು ಶಾಶ್ವತ ಕಲಿಕೆಯೊಂದಿಗೆ ಜೀವನದ ಅನುಭವ ನೀಡುತ್ತವೆ. ವಿದ್ಯಾರ್ಥಿಗಳು ಉತ್ತಮ ಪ್ರವಾಸಿ ಕೇಂದ್ರಗಳೊಂದಿಗೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಮೂಲಕ ಉತ್ತಮ ಅನುಭವ ಪಡೆದುಕೊಂಡು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು. ಪ್ರವಾಸದ ರೂಪುರೇಷೆ ಕುರಿತು ಮಾಹಿತಿ ನೀಡಿದ ತಾಲೂಕು ನೋಡೆಲ್ ಅಧಿಕಾರಿ ಕೆ.ಬಿ.ರಾಧಾಕೃಷ್ಣ, ತಾಲ್ಲೂಕಿನಿಂದ ಎಸ್.ಸಿ.ಮತ್ತು ಎಸ್.ಟಿ.ಗೆ ಸೇರಿದ
100 ವಿದ್ಯಾರ್ಥಿ ಗಳಿಗೆ ಉಚಿತ ಪ್ರವಾಸ ಹಮ್ಮಿ ಕೊಳ್ಳಲಾಗಿದೆ. ಮಕ್ಕಳಲ್ಲಿ ಶೈಕ್ಷಣಿಕ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದರು. ಮಕ್ಕಳಿಗೆ ಸಿಹಿ ವಿತರಿಸಿ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಬಿ.ಸುರೇಶ್, ಇಂತಹ ಪ್ರವಾಸಗಳು ಮಕ್ಕಳಿಗೆ ಉತ್ತಮ ಅನುಭವ ನೀಡಲು ಸಹಕಾರಿಯಾಗಿವೆ ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿ, ಶೈಕ್ಷಣಿಕ ಪ್ರವಾಸವು ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಪಠ್ಯ ಚಟುವಟಿಕೆಗಳೊಂದಿಗೆ ಇತಿಹಾಸ, ವಿಜ್ಞಾನ, ಭೌಗೋಳಿಕ ಪರಿಸರ ಮತ್ತಿತರ ಸಂಗತಿಗಳ ವಾಸ್ತವಿಕ ಅನುಭವದ ಮೂಲಕ ಹಲವು ವಿಚಾರಗಳ ಕಲಿಕೆಯಾಗುವುದರಿಂದ ಪ್ರವಾಸಗಳು ಮಕ್ಕಳ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದರು.
ಎನ್.ಸಿ.ಸಿ. ಅಕಾಡೆಮಿಕ್ ಎ.ಎನ್.ಓ.ಯಾಗಿರುವ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎಸ್.ಮಹೇಂದ್ರ ಮಾತನಾಡಿದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಪಿ.ನವೀನ್ ಕುಮಾರ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಕೆ.ಹರೀಶ್, ಕಾನ್ ಬೈಲ್ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೆ.ಮೂರ್ತಿ, ವಿವಿಧ ಶಾಲೆಗಳ ಶಿಕ್ಷಕರಾದ ಎಸ್.ಆರ್.ಚಿತ್ರಾ, ಎನ್.ಕೆ.ಮಾಲಾದೇವಿ, ಭಾರತಿ, ಎಚ್.ಎಂ.ಪ್ರಕಾಶ್, ಮೇರಿ ಮಾರ್ಗರೇಟ್, ಎಚ್..ಬಿ.ಬಸವರಾಜ್, ಚೇತನ್ ಮತ್ತಿತರರು ಇದ್ದರು. ಸೋಮವಾರಪೇಟೆ ಪಟ್ಟಣದಿಂದಲೂ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಲಾಗಿದ್ದು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನಿಂದ ಒಟ್ಟು 100 ಮಕ್ಕಳು ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಲಿದ್ದಾರೆ
ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ತಿಳಿಸಿದ್ದಾರೆ. ನಾಲ್ಕು ದಿನಗಳ ಪ್ರವಾಸ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಟಿ.ಬಿ.ಡ್ಯಾಂ, ಚಿತ್ರದುರ್ಗ, ಹಂಪಿ, ಗೋಕರ್ಣ, ಉಡುಪಿ, ಮಣಿಪಾಲ್, ಮಂಗಳೂರು ಮತ್ತಿತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.