ವಿರಾಜಪೇಟೆ ಜ.13 NEWS DESK : ಸರಕಾರಿ ಶಿಕ್ಷಣ ಸಂಸ್ಥೆಗಳಾದರು, ಖಾಸಗಿ ಶಿಕ್ಷಣ ಕೇಂದ್ರಗಳಾದರೂ ಸದಾ ಸಮಾಜದ ಒಳಿತನ್ನೇ ಬಯಸುತ್ತದೆ. ಈ ತಳಹದಿಯಿಂದಲೇ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತದೆ ಎಂದು ವಿರಾಜಪೇಟೆ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಕಲ್ಲುಬಾಣೆಯ ಬದ್ರಿಯಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳ ಬದುಕಿನ ಮಹತ್ತರವಾದ ಘಟ್ಟದಲ್ಲಿ ಆಂತರಿಕ, ಬಾಹ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆಕಾರ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹುಮುಖ್ಯವಾದದ್ದು. ಆದ್ದರಿಂದ ಯಾವುದೇ ಸವಾಲುಗಳಿದ್ದರೂ ವಿದ್ಯಾರ್ಥಿಗಳಲ್ಲಿನ ಆಂತರಿಕ ಅಂದತ್ವ ತೊಡೆದುಹಾಕಿ ಅಕ್ಷರ ಶ್ರೀಮಂತಿಕೆಯ ಮೂಲಕ ಬದುಕಿನ ಮೌಲ್ಯ ಹೆಚ್ಚಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಕಿಂಚಿತ್ತೂ ವಂಚನೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಎಚ್ಚರಿಸಿದರು. ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅತಿ ಸುಲಭದಲ್ಲಿ ದೊರೆಯುತ್ತಿದೆ. ಬಡತನದ ಮಧ್ಯೆ ಶಿಕ್ಷಣ ಪಡೆಯುತ್ತಿದ್ದ ಹಿಂದಿನ ಕಾಲದಲ್ಲಿ ನಮ್ಮ ಕಲಿಕಾ ಸಾಮರ್ಥ್ಯವನ್ನು ನಾವೇ ನಿರ್ಧರಿಸಬೇಕಿತ್ತು. ಪ್ರತಿಯೊಂದು ಮಾಹಿತಿಯೂ ಇಂದು ಅಂಗೈಯಲ್ಲಿ ಸುಲಭವಾಗಿ ದೊರೆಯುವಂತಹ ಯಾಂತ್ರಿಕ ಯುಗದಲ್ಲಿ ಇಂದಿನ ವಿದ್ಯಾರ್ಥಿಗಳಿದ್ದರೂ, ಶಿಕ್ಷಣ ಪಡೆಯುವಲ್ಲಿನ ಸವಾಲುಗಳು ಕಡಿಮೆಯಾಗಲಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಅಭಿಪ್ರಾಯಪಟ್ಟ ಸ್ವಾಮೀಜಿ, ದಿನದ 24 ತಾಸುಗಳ ಪೈಕಿ ವಿದ್ಯಾರ್ಥಿಗಳು ಕೇವಲ 7ರಿಂದ 8ಗಂಟೆಗಳಷ್ಟೇ ಶಾಲೆಯಲ್ಲಿ ಇರುತ್ತಾರೆ. ಉಳಿದ 16 ಗಂಟೆಗಳನ್ನು ಮನೆಯಲ್ಲಿ ಕಳೆಯುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯಗಳ ಶಿಕ್ಷಣ ಕೇವಲ ಶಾಲೆಗಳಿಗೆ ಮಾತ್ರ ಸೀಮಿತಪಡಿಸಬಾರದು ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಜೀವನಪರ್ಯಂತ ಯಾರಿಂದಲೂ ಕಸಿದುಕೊಳ್ಳಲಾಗದ ಸಂಪತ್ತಾಗಿರುವ ಶಿಕ್ಷಣ ಇಂದು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಹಿತಿ ತಂತ್ರಜ್ಞಾನ ಆವಿಷ್ಕಾರಗೊಂಡ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಪಡೆಯಲು ಯಾವುದೇ ರೀತಿಯ ಅಡೆತಡೆಗಳಿಲ್ಲ. ಇಂದು ಎಷ್ಟೇ ಆರ್ಥಿಕ ಬಡತನವಿದ್ದರೂ ಶಿಕ್ಷಣದಿಂದ ವಂಚಿತರಾಗುವ ಸನ್ನಿವೇಶಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸದ ಗುರಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿಂದೆ ಕಡು ಬಡತನಗಳ ನಡುವೆ ಮನೆಯ ಕೃಷಿ ಚಟುವಟಿಕೆಗಳಿಗೆ ನೆರವಾಗಿ ನಂತರ ಹತ್ತಾರು ಕಿ.ಮೀ. ನಡೆದುಕೊಂಡು ಹೋಗಿ ಶಿಕ್ಷಣ ಪಡೆಯುವ ಕಾಲವಿತ್ತು. ಬಡತನದ ಬೇಗೆ ಅಂದು ಬಹಳಷ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುಳ್ಳಾಗಿತ್ತು. ಈ ಕಾರಣದಿಂದ ಇಂದಿಗೂ ಪರಿತಪಿಸುತ್ತಿರುವ ಸಾಕಷ್ಟು ಜನರನ್ನು ಕಾಣಬಹುದಾಗಿದೆ. ಆದರೆ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಇಂದಿನ ಶಿಕ್ಷಣ ವ್ಯವಸ್ಥೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಬದ್ಧತೆ ಮತ್ತು ಗುರಿ ಸಾಧಿಸುವ ಛಲವೊಂದಿದ್ದರೆ ಶೈಕ್ಷಣಿಕವಾಗಿ ಮುಂದುವರಿಯಲು ಇಂದು ಯಾರಿಗೂ ಅಸಾಧ್ಯವಲ್ಲ ಎಂದು ಸೂಫಿ ಹಾಜಿ ಹೇಳಿದರು. ಕಾರ್ಯಕ್ರಮಕ್ಕೂ ಮೊದಲು, ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ವಸ್ತುಗಳ ಪ್ರದರ್ಶನವನ್ನು ಸೂಫಿ ಹಾಜಿ ಉದ್ಘಾಟಿಸಿದರು. ಅಂಗವೈಕಲ್ಯತೆಯ ನಡುವೆಯೂ ಕಲ್ಲುಬಾಣೆಯಲ್ಲಿ ಆರಂಭಿಕ ಶಿಕ್ಷಣ ಪಡೆದು ನಂತರ ಎಂಎಸ್ಸಿ ಸ್ನಾತಕೋತ್ತರ ಪದವಿಗಳಿಸಿ ಕೆ.ಎಸ್.ಇ.ಟಿ.ಯಲ್ಲಿ ತೇರ್ಗಡೆ ಹೊಂದಿ ಇದೀಗ ಶಿಕ್ಷಕಿಯಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿನಿ ಎಂ. ಆರ್. ರಿಹಾ ಮುಸ್ಕಾನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಬದ್ರಿಯಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪಿ.ಕೆ. ಅಫ್ಸಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆರ್ಜಿ ಗ್ರಾ. ಪಂ. ಅಧ್ಯಕ್ಷ ಫಾತಿಮಾ ಸುಲೇಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ. ಎ. ಶಫೀಕ್, ವಿರಾಜಪೇಟೆ ಕ್ಷೇತ್ರ ಸಂಪನ್ಮೂಲ ಸಂಯೋಜಕಿ ಬಿಂದು, ಬದ್ರಿಯಾ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಪಿ.ಕೆ. ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಶಹದೀರ್ ಅಲಿ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಗುಲ್ನಾರ್ ಬಾನು ವಂದಿಸಿದರು.