ವಿರಾಜಪೇಟೆ ಜ.13 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಗಾಗಿ ಪ್ರಾಯೋಜಿಸಿರುವ ಕೆ.ಎಂ.ಎ.ವಿನ್ನರ್ಸ್ ರೋಲಿಂಗ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ವಿರಾಜಪೇಟೆಯ ಕೆ.ಎಂ.ಎ. ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳ ಸಮ್ಮುಖದಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಿದರು. ಟ್ರೋಫಿಯನ್ನು ಜ. 17 ರಿಂದ 19 ರವರೆಗೆ ಚಿಟ್ಟಡೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ಕೂವಲೆರ ಚಿಟ್ಟಡೆ ಕಪ್-2025ರ ಆತಿಥ್ಯ ವಹಿಸಿರುವ ಚಿಟ್ಟಡೆಯ ಕೂವಲೆರ ಕುಟುಂಬದ ಆಯೋಜಕರಿಗೆ ಹಸ್ತಾಂತರಿಸಲಾಯಿತು. ಪಂದ್ಯಾವಳಿ ಆಯೋಜನಾ ಸಮಿತಿಯ ಪ್ರಮುಖರಾದ ಉಮ್ಮರ್, ಫಕ್ರುದ್ದೀನ್, ಸಜೀರ್ ಅವರು ಟ್ರೋಫಿಯನ್ನು ಕೂವಲೆರ ಕುಟುಂಬದ ಪರವಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೂಫಿ ಹಾಜಿ, ಕೊಡಗು ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಇತ್ತೀಚಿನ ಕ್ರೀಡಾಕೂಟಗಳ ಯಶಸ್ಸು ಪ್ರತಿ ಯುವ ಕ್ರೀಡಾಪಟುವಿಗೆ ದೊಡ್ಡ ಸ್ಫೂರ್ತಿಯಾಗುತ್ತಿದೆ. ಪಂದ್ಯಾವಳಿಯನ್ನು ಯೋಜನಾ ಬದ್ಧ ಮತ್ತು ಶಿಸ್ತು ಬದ್ಧವಾಗಿ ನಡೆಸಲು ಮೊದಲ ಆದ್ಯತೆ ನೀಡಬೇಕು. ಯಾವುದೇ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಯೋಜಕರ ಮೇಲಿರುತ್ತದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರಲ್ಲದೆ, ಮೂರು ದಿನಗಳ ಕಾಲ ನಡೆಯುವ ಈ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಗೆ ಸಂಸ್ಥೆಯ ಪರವಾಗಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿದ್ದ ಕೆ.ಎಂ.ಎ. ಆಡಳಿತ ಮಂಡಳಿಯ ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ.ಇಸ್ಮಾಯಿಲ್ ಮಾತನಾಡಿ, ಪಂದ್ಯಾವಳಿಯಲ್ಲಿ ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಂಡಾಗ ಮಾತ್ರ ಯಶಸ್ವಿ ಸಾಧ್ಯ. ಕ್ರೀಡಾಕೂಟಗಳನ್ನು ಹಬ್ಬದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಕೆ.ಎಂ.ಎ. ನಿರ್ದೇಶಕರುಗಳಾದ ಪುದಿಯತ್ತಂಡ ಹೆಚ್. ಸಂಶುದ್ದೀನ್, ಕೆಂಗೋಟಂಡ ಎಸ್. ಸೂಫಿ, ದುದ್ದಿಯಂಡ ಹೆಚ್. ಮೊಯ್ದು ಹಾಜಿ, ಆಲೀರ ಹೆಚ್. ಅಬ್ದುಲ್ ಲತೀಫ್, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.