ಸೋಮವಾರಪೇಟೆ ಜ.14 NEWS DESK : ಕಾಫಿ ಗುಣಮಟ್ಟದ ಆಧಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿಯ ಬೇಡಿಕೆ ಮತ್ತು ಬೆಲೆ ನಿರ್ಧಾರವಾಗುತ್ತದೆ ಎಂದು ಭಾರತ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ಅಭಿಪ್ರಾಯಿಸಿದರು. ಕಾಫಿ ಮಂಡಳಿ ಮತ್ತು ಹೆಚ್‍ಐಎಲ್ ಇಂಡಿಯಾ ಸಹಯೋಗದಲ್ಲಿ ಸೋಮವಾರಪೇಟೆಯ ಸಾಕ್ಷಿ ಕನ್ವೆನ್‍ಷನ್ ಸಭಾಂಗಣದಲ್ಲಿ ನಡೆದ ಸಮಗ್ರ ಕೀಟ ನಿರ್ವಹಣೆ ಕುರಿತು ಬೆಳೆಗಾರರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಫಿಯ ಗುಣಮಟ್ಟವನ್ನು ಬೆಳೆಗಾರರು ನಿರಂತರವಾಗಿ ಕಾಪಾಡಿಕೊಂಡು ಬಂದರೆ ಉತ್ತಮ ಬೆಲೆ ಮತ್ತು ಬೇಡಿಕೆ ಇದ್ದೇ ಇರುತ್ತದೆ. ಭಾರತದ ಕಾಫಿ ಇಂದಿಗೂ ಬೇಡಿಕೆ ಇದೆ. ಇದೀಗ ರೋಬಸ್ಟಾ ಕಾಫಿಗೆ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಳೆಗಾರರು ಬೆಳೆಯ ಉತ್ಪನ್ನ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದರು.ಆಧುನಿಕ ತಂತ್ರಜ್ಞಾನದ ವೇಗದಿಂದಾಗಿ ಬೆಳೆ ನಿರ್ವಹಣೆಯೂ ಕೂಡ ಸುಲಭ.ಅಗತ್ಯ ಸಂದರ್ಭಗಳಲ್ಲಿ ರೈತರು ಕಾಫಿ ಮಂಡಳಿ ಮತ್ತು ವಿಜ್ಞಾನಿಗಳಿಂದ ಸೂಕ್ತ ಮಾರ್ಗದರ್ಶನ ಪಡೆಯುವುದು ಕೂಡ ಅಗತ್ಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸರಕಾರದ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ನಿವೇದಿತಾ ಶುಕ್ಲಾ ಮಾತನಾಡಿ,ಕಾಫಿ ಮಂಡಳಿ ಕಾಫಿ ಬೆಳೆಗಾರರ ಹಿತವನ್ನು ಕಾಪಾಡಲು ಸದಾ ಸಿದ್ದವಿದೆ.ಜೈವಿಕ ನಿಯಂತ್ರಣ,ಕಾಫಿ ಪ್ರಭೇಧಗಳ ಬಳಕೆಯಂತಹ ಸಮಗ್ರ ಕೀಟ ನಿರ್ವಹಣೆ ಅಭ್ಯಾಸಗಳ ಅಳವಡಿಕೆಗೆ ಉತ್ತೇಜಿಸುವುದು, ಸಂಶ್ಲೇಷಿತ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತೀಯ ಕಾಫಿಯಲ್ಲಿ ಕೀಟನಾಶಕ ಅವಶೇಷಗಳನ್ನು ಕಡಿಮೆ ಮಾಡಲು ಮಂಡಳಿ ಸಹಾಯ ಮಾಡುತ್ತದೆ.ಮಾನವನ ಆರೋಗ್ಯ ಪರಿಸರವನ್ನು ಕಾಪಾಡಲು ಬೆಳೆಗಾರರಿಗೆ ಮತ್ತು ಕೃಷಿ ರಾಸಾಯನಿಕ ಉದ್ಯಮದಲ್ಲಿನ ಎಲ್ಲಾ ಪಾಲುದಾರರಿಗೆ ಬೆಂಬಲ ನೀಡುತ್ತದೆ ಎಂದರು. ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಇಂದು ಜಿಲ್ಲೆಯಲ್ಲಿ ಶೇ.80 ರಷ್ಟು ರೋಬಸ್ಟಾ ಮತ್ತು ಶೇ.20ರಷ್ಟು ಅರೇಬಿಕಾ ಬೆಳೆಯನ್ನು ಬೆಳೆಯಲು ಬೆಳೆಗಾರರು ಉತ್ಸುಕರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ಉತ್ತಮ ಮರಗಳನ್ನು ಬೆಳೆಸುವುದರೊಂದಿಗೆ ಪರಿಸರವನ್ನು ಕಾಪಾಡಿಕೊಳ್ಳುತ್ತಿದ್ದಾರೆ ಎಂದರು. ಎಚ್‍ಐಎಲ್‍ನ ಸಿಎಂಡಿ ಕುಲ್‍ದೀಪ್‍ಸಿಂಗ್,ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್‍ಕುಮಾರ್,ಜಿಲ್ಲಾ ಸಿ.ಪಿ.ಎ ಅಧ್ಯಕ್ಷ ನಂದಾ ಬೆಳ್ಯಪ್ಪ, ಎಚ್‍ಐಎಲ್ ಮಾರುಕಟ್ಟೆ ನಿರ್ದೆಶಕ ಶಶಾಂಕ್ ಚತುರ್ವೇದಿ ಮಾತನಾಡಿದರು.