ಮಡಿಕೇರಿ ಜ.14 NEWS DESK : ಅತ್ಯಂತ ಸಂಪದ್ಭರಿತವಾದ ‘ಅರೆಭಾಷೆ’ ಮತ್ತು ಸಂಸ್ಕೃತಿಯ ಸಂರಕ್ಷಣೆಯೊಂದಿಗೆ, ಅದನ್ನು ಮತ್ತಷ್ಟು ಸುಪುಷ್ಟವಾಗಿ ಬೆಳೆಸುವ ನಿಟ್ಟಿನ ಕಾರ್ಯಗಳಿಗೆ ಸಮುದಾಯ ಬಾಂಧವರು ಹೆಚ್ಚಿನ ಸಹಕಾರ ನೀಡಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕರೆ ನೀಡಿದರು. ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ‘ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಅರೆ ಭಾಷೆ’ ಸಂಸ್ಕೃತಿಯ ಬೆಳವಣಿಗೆಯ ನೆಲೆಯಲ್ಲಿ ಅರೆಭಾಷೆ ಅಕಾಡೆಮಿ ಕಾರ್ಯನಿರ್ವಹಿಸುವಂತದ್ದು. ಹೀಗಿದ್ದೂ ಅರೆಭಾಷೆಯನ್ನಾಡುವ ಹೆಚ್ಚ್ಚಿನವರು ಗೌಡ ಸಮೂಹಕ್ಕೆ ಸೇರಿದವರಾಗಿದ್ದಾರೆ. ಈ ನೆಲೆಯಲ್ಲಿ ಅಕಾಡೆಮಿಯು ಕೊಡಗು ಗೌಡ ಸಂಘದ ಅರೆಭಾಷಾ ಚಟುವಟಿಕೆಗಳಿಗೆ ತನ್ನ ಸಹಕಾರವನ್ನು ನೀಡುತ್ತಿದೆಯೆಂದು ತಿಳಿಸಿದರು. ಅರೆಭಾಷಾ ಅಭಿವೃದ್ಧಿಗೆ ಅಕಾಡೆಮಿ ರಚನೆಯಾಗುವುದಕ್ಕೆ ಎಷ್ಟೋ ವರ್ಷಗಳ ಹಿಂದೆಯೇ ಕೊಡಗು ಗೌಡ ವಿದ್ಯಾ ಸಂಘ ಸ್ಥಾಪನೆಯಾಗಿರುವುದಲ್ಲದೆ, ಮಕ್ಕಳ ಶಿಕ್ಷಣ ಸೇರಿದಂತೆ ಭಾಷಾ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿದೆ. ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಅಧಿಕಾರದಲ್ಲಿದ್ದ ಸಂದರ್ಭ ಇಲ್ಲಿನ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಅಕಾಡೆಮಿ ರಚನೆಯಾಗಿರುವ ಬಗ್ಗೆ ಸ್ಮರಿಸಿಕೊಂಡ ಸದಾನಂದ ಮಾವಜಿ, ಅರೆಭಾಷೆಯ ಬೆಳವಣಿಗೆಗಾಗಿ ಪ್ರಸ್ತುತ ಅಕಾಡೆಮಿಯು ವಿವಿಧೆಡೆಗಳಲ್ಲಿ ಗಡಿ ಉತ್ಸವಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಕಾಡೆಮಿಯ ತ್ರೈಮಾಸಿಕ ಪತ್ರಿಕೆಗೆ ಬರಹಗಾರರ ಕೊರತೆ ಇದ್ದು, ಸಮೂಹ ಬಾಂಧವರು ಪತ್ರಿಕೆಗೆ ಬರೆಯಲು ಮುಂದಾಗಬೇಕೆಂದು ಇದೇ ಸಂದರ್ಭ ತಿಳಸಿದರು.
ಮಡಿಕೇರಿಯಲ್ಲಿ ಅಕಾಡೆಮಿ ಪ್ರಶಸ್ತಿ ಪ್ರದಾನ ಚಿಂತನೆ : ಅರೆಭಾಷಾ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಡಿಕೇರಿಯ ಇದೇ ಸಭಾಂಗಣದಲ್ಲಿ ನಡೆಸುವ ಉದ್ದೇಶ ಇರುವುದಾಗಿ ಸದಾನಂದ ಮಾವಜಿ ತಿಳಿಸಿದರು. ಸೋಮವಾರಪೇಟೆಯ ಸಾಂದೀಪನಿ ಪ್ರೌಢಶಾಲೆಯ ಅಧ್ಯಕ್ಷ ಮೂಡಗದ್ದೆ ದಾಮೋದರ ಮಾತನಾಡಿ, ಕೊಡಗು ಗೌಡ ವಿದ್ಯಾ ಸಂಘವು ಗೌಡ ಸಮುದಾಯದ ಮಕ್ಕಳಿಗೆ ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿಯನ್ನು ಒದಗಿಸಲು ಮುಂದಾಗಬೇಕು ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ಕೊಡಗು ಗೌಡ ಸಮಾಜದ ಗೌರವ ಕಾರ್ಯದರ್ಶಿ ಕೋಳುಮುಡಿಯನ ಆರ್.ಅನಂತ ಕುಮಾರ್ ಮಾತನಾಡಿ, ಹಿರಿಯರ ಉದಾತ್ತ ಚಿಂತನೆಗಳ ಫಲವಾಗಿ 1908ರಲ್ಲಿ ಕೊಡಗು ವಿದ್ಯಾಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಘದ ಮೂಲಕ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಗತ್ಯ ನೆರವನ್ನು ನೀಡಲು ವಿದ್ಯಾನಿಧಿಯ ಮೊತ್ತವನ್ನು ಹೆಚ್ಚಿಸಿಕೊಳ್ಳುವುದು ಅತ್ಯವಶ್ಯವೆಂದು ಸಲಹೆಯನ್ನಿತ್ತರು. ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಬಾರಿಯಂಡ ಜೋಯಪ್ಪ ಮಾತನಾಡಿ, ಕೊಡಗು ವಿದ್ಯಾಸಂಘದಿಂದ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರದ ಪ್ರೋತ್ಸಾಹವು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅತ್ಯಂತ ಪ್ರಮುಖವಾದುದು. ಇಂತಹ ಪ್ರತಿಭಾ ಪುರಸ್ಕಾರವನ್ನು ಮಕ್ಕಳು ಬಳಸಿಕೊಂಡು ಶೈಕ್ಷಣಿಕ ಸಾಧನೆಗೆ ಮುಂದಾಗಬೇಕು. ಮಕ್ಕಳ ಓದಿಗೆ ಪೋಷಕರು ಪ್ರೋತ್ಸಾಹ ಮತ್ತು ಸ್ವಾತಂತ್ರ್ಯವನ್ನು ನೀಡಿ. ಆದರೆ, ಯಾವುದೇ ಕಾರಣಕ್ಕು ಇಂತಹದ್ದೆ ವಿಷಯವನ್ನು ಓದುವಂತೆ ಒತ್ತಾಯ ಹಾಕಬೇಡಿ ಎಂದು ಸಲಹೆ ನೀಡಿದರು. ಕಾಫಿ ಮಂಡಳಿಯ ನಿವೃತ್ತ ಸಂಪರ್ಕಾಧಿಕಾರಿ ಬಾರಿಕೆ ಎನ್.ಅಯ್ಯಪ್ಪ ಮಾತನಾಡಿ, ಶಿಕ್ಷಣವೆನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಗತ್ಯ ಪ್ರೇರಣೆಯನ್ನು ನೀಡಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಅಂಬೆಕಲ್ಲು ನವೀನ್ ಕುಶಾಲಪ್ಪ, ಸಂಘವು 5 ಸಾವಿರ ಮಂದಿ ಸದಸ್ಯರನ್ನು ಹೊಂದಿದೆ. ಗೌಡ ಸಮೂಹ ಬಾಂಧವರ ಅಗತ್ಯತೆಗಳಿಗೆ ಅನುಗುಣವಾಗಿ ಪ್ರಸ್ತುತ 2 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ನೂತನ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ಗ್ರಂಥಾಲಯವನ್ನು ಸಜ್ಜುಗೊಳಿಸುವ ಉದ್ದೇಶವಿದೆ. ಕೊಡಗು ಗೌಡ ವಿದ್ಯಾಸಂಘದ ನಿಧಿಗೆ ಸಮೂಹ ಬಾಂಧವರು ಅಗತ್ಯ ನೆರವನ್ನು ಒದಗಿಸಬೇಕೆಂದು ಇದೇ ಸಂದರ್ಭ ಮನವಿ ಮಾಡಿದರು.
ಪ್ರತಿಭಾ ಪುರಸ್ಕಾರ-ಸಾಧಕರಿಗೆ ಸನ್ಮಾನ :: ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಉನ್ನತ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ 80ಕ್ಕೂ ಹೆಚ್ಚಿನ ಮಕ್ಕಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು. ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಎಂಎಸ್‍ಸಿ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದ ಬೊಳ್ತಜಿರ ಎ.ರಕ್ಷಿತ ಭರತ್, ಎಲ್‍ಎಲ್‍ಬಿಯನ್ನು 5ನೇ ರ್ಯಾಂಕ್‍ನೊಂದಿಗೆ ಪೂರ್ಣಗೊಳಿಸಿದ ಕೊಟ್ಟಕೇರಿಯನ ಶ್ರೀಜಾ ದಯಾನಂದ, ಮೆಕ್ಯಾನಿಕಲ್ ಇಂಜಿನಿಯರಂಗ್‍ನಲ್ಲಿ ದ್ವಿತೀಯ ರ್ಯಾಂಕ್ ಪಡೆದ ಪಾರೆಮಜಲು ಹೇಮಂತ್, ಚಿನ್ನದ ಪದಕದೊಂದಿಗೆ ಬಿಎಸ್‍ಸಿ ನರ್ಸಿಂಗ್ ಪದವಿ ಪಡೆದ ಕಾವೇರಿಮನೆ ಕ್ಷಿತಿಜಾ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಅರೆಭಾಷಾ ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ಅರ್ವತ್ತೊಕ್ಲು ಕಾಫಿ ಬೆಳೆಗಾರರಾದ ತಳೂರು ಮುತ್ತಮ್ಮ ರಾಜಗೋಪಾಲ್ ಮಾತನಾಡಿದರು. ವೇದಿಕೆಯಲ್ಲಿ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಹಾಜರಿದ್ದರು. ಪೇರಿಯನ ಪ್ರಣವಿ ಉದಯ ಪ್ರಾರ್ಥಿಸಿ, ಸಂಘದ ನಿರ್ದೇಶಕರಾದ ಚೊಕ್ಕಾಡಿ ಅಪ್ಪಯ್ಯ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ಅಮೆ ಸಿ.ಸೀತಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ನಿರ್ದೇಶಕಿ ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪೇರಿಯನ ಕೆ.ದಿನೇಶ್ ಕುಮಾರ್ ವಂದಿಸಿದರು.