ಮಡಿಕೇರಿ ಜ.14 NEWS DESK : ಕೊಡವರ ಹಕ್ಕುಗಳ ಪರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಎಲ್ಲೂ ಶಾಂತಿಭಂಗವಾಗುವ ವರ್ತನೆಯನ್ನು ತೋರಿಲ್ಲ. ಆದ್ದರಿಂದ ವಿನಾಕಾರಣ ಹೂಡಲಾಗಿರುವ ಪ್ರಕರಣವನ್ನು ತಕ್ಷಣ ರದ್ದು ಮಾಡಬೇಕೆಂದು ಬೇಂಗ್ ನಾಡ್ ಕೊಡವ ಸಮಾಜ ಮತ್ತು ಬೇಂಗ್‍ನಾಡ್ ಸ್ಪೋರ್ಟ್ಸ್ ಐಂಡ್ ರಿಕ್ರಿಯೇಷನ್ ಕ್ಲಬ್ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಂಗ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಬಿ.ಗಣಪತಿ ಪ್ರಕರಣ ದಾಖಲಿಸಿರುವುದು ಖಂಡನೀಯ, ಒಂದು ವೇಳೆ ನಾಚಪ್ಪ ಅವರನ್ನು ಬಂಧಿಸಿದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅತ್ಯಂತ ಸೂಕ್ಷ್ಮ ಕೊಡವ ಜನಾಂಗ, ಕೊಡವರ ಭೂಮಿ, ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಮಂದ್, ಮಾನಿ, ದೇವನೆಲೆಯ ರಕ್ಷಣೆಗಾಗಿ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾನೂನಿನ ಚೌಕಟ್ಟಿನಡಿ ಎನ್.ಯು.ನಾಚಪ್ಪ ಅವರು ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಕೊಡವರ ಹಕ್ಕುಗಳ ಪರ ಹೋರಾಟ ನಡೆಸುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಜನಾಂಗವನ್ನು ವಿರೋಧಿಸಿಲ್ಲ, ನಿಂದಿಸಿಲ್ಲ ಮತ್ತು ಇತರರ ಆಚಾರ ವಿಚಾರವನ್ನು ಅನುಸರಿಸಿಲ್ಲ. ದೇಶದ ಸಂವಿಧಾನಕ್ಕೆ ಬದ್ಧವಾಗಿ ಕಾನೂನು ತಜ್ಞರ ಸಲಹೆಗಳನ್ನು ಪಡೆದುಕೊಂಡೇ ನಾಚಪ್ಪ ಅವರು ಹೋರಾಟಗಳನ್ನು ರೂಪಿಸುತ್ತಿದ್ದಾರೆ. ಕೊಡವರ ನಾಡು ನುಡಿ, ಬುಡಕಟ್ಟು ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಸಂವಿಧಾನದ ಅಡಿಯಲ್ಲಿ ರಕ್ಷಣೆ ಪಡೆಯಲು ಬುಡಕಟ್ಟು ಸ್ಥಾನಮಾನ, ಕೊಡವ ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸುವುದು, ಕೊಡವರ ಆವಾಸ ಸ್ಥಾನ ಕೊಡವ ಆಟೊನಮಸ್ ರೀಜನ್ ಕೊಡವರ ನರಮೇಧದಂತ ಜಾಗ ದೇವಟ್ ಪರಂಬನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆಯೇ ಹೊರತು ಎಲ್ಲೂ ರಾಷ್ಟ್ರೀಯತೆಯ ಅಥವಾ ಇತರ ಜನಾಂಗದ ವಿರುದ್ಧ ನಡೆದುಕೊಂಡಿಲ್ಲ. ನಾಚಪ್ಪ ಅವರ ಹೋರಾಟದ ಹಾದಿಯನ್ನು ಸಹಿಸದ ಕೆಲವು ವ್ಯಕ್ತಿಗಳು ವೀರಪರಂಪರೆಯನ್ನು ನಾಮಾವಶೇಷ ಮಾಡಲು ಹೊರಟಿದ್ದಾರೆ. ಈ ವ್ಯಕ್ತಿಗಳಿಗೆ ಜನಾಂಗದ ಕೆಲವು ಮುಖಂಡರು ಬೆಂಬಲವಾಗಿ ನಿಂತಿದ್ದಾರೆ ಎಂದು ಬಾಚರಣಿಯಂಡ ಬಿ.ಗಣಪತಿ ಆರೋಪಿಸಿದರು. ಯಾವುದೇ ಪ್ರಚೋದನೆ, ಅವಹೇಳನ ಅಥವಾ ಜನಾಂಗದ ನಿಂದನೆ ಮಾಡದೆ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ಎನ್.ಯು.ನಾಚಪ್ಪ ಅವರ ವಿರುದ್ಧದ ಪ್ರಕರಣವನ್ನು ತಕ್ಷಣ ರದ್ದು ಮಾಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬೇಂಗ್‍ನಾಡ್ ಸ್ಪೋರ್ಟ್ಸ್ ಐಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪಟ್ಟಮಾಡ ಸಿ.ಕುಶಾಲಪ್ಪ, ಕೊಡವ ಸಮಾಜದ ಸದಸ್ಯ ನಾಪಂಡ ಪ್ರತಾಪ್, ಸಿಎನ್‍ಸಿ ಕಾರ್ಯಕರ್ತರಾದ ಮಂದಪಂಡ ಮನೋಜ್ ಮಂದಣ್ಣ, ಅಳ್ಮಂಡ ಎಂ.ಗಣಪತಿ ಹಾಗೂ ಸಾಮಾಜಿಕ ಕಾರ್ಯಕರ್ತ ಬಡ್ಡಿರ ಎಂ.ನಂದಕುಮಾರ್ ಉಪಸ್ಥಿತರಿದ್ದರು.