ಮಡಿಕೇರಿ NEWS DESK ಜ.17 : ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಅರೆಭಾಷೆ ಹಾಗೂ ಕೊಡವ ಸಮುದಾಯಗಳ ನಾಯಕರುಗಳು ಜೊತೆೆ ಸೇರಿ ಸಂಧಾನ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮುಂದಾದರೆ ಆ ಸಭೆಯಲ್ಲಿ ನಾನು ಕೂಡ ಭಾಗಿಯಾಗುವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು ತಿಂಗಳ ಬೆಳವಣಿಗೆ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ. ಎಲ್ಲರೂ ಶಾಂತಿಯನ್ನು ಕಾಪಾಡಬೇಕಾಗಿದೆ, ಸಂಧಾನ ಮಾತುಕತೆಯ ಮೂಲಕವೇ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಎರಡೂ ಸಮುದಾಯದವರು ಜೊತೆ ಸೇರಿ ನಡೆಸುವ ಸಭೆಯಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಶಾಂತಿಯುತ, ಶಾಶ್ವತ ಪರಿಹಾರ ಕಂಡುಕೊಳ್ಳೋಣ ಎಂದು ಶಾಸಕರು ಮನವಿ ಮಾಡಿದ್ದಾರೆ. ಸುಮಾರು 7ಲಕ್ಷ ಜನಸಂಖ್ಯೆ ಹೊಂದಿರುವ ಕೊಡಗು ಜಿಲ್ಲೆ ಕೇವಲ ಒಂದು ಎರಡು ಜನಾಂಗಕ್ಕೆ ಸೀಮಿತವಾಗಿಲ್ಲ, ವಿವಿಧ ಜಾತಿ, ಜನಾಂಗ, ಸಮುದಾಯದ ಮಂದಿ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಪರಿಶಿಷ್ಟರು, ಹಿಂದುಳಿದ ವರ್ಗದವರು, ಮಲೆಯಾಳ ಸಮಾಜದವರು, ಕೊಡವ ಭಾಷಿಕ ಸಮುದಾಯಗಳು, ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು ಸೇರಿದಂತೆ ಇಲ್ಲಿರುವ ಎಲ್ಲರೂ ನೆಮ್ಮದಿಯ ಬದುಕು ಸಾಗಿಸಬೇಕಾಗಿದೆ. ಕೆಲವರಿಂದ ಇತರರಿಗೆ ಸಮಸ್ಯೆ ಆಗಬಾರದು, ಯಾರೂ ಕೆದಕುವ ರೀತಿಯ ವರ್ತನೆಯನ್ನು ತೋರಬಾರದು. ಕಾನೂನು ಮತ್ತು ಸಂವಿಧಾನ ಶ್ರೇಷ್ಠವಾಗಿದ್ದು, ಕಾನೂನು ಮುರಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ.