ಮಡಿಕೇರಿ ಏ.19 : ವಿಧಾನಸಭಾ ಚುನಾವಣೆಗೆ ಈ ಬಾರಿ ಬಿಎಸ್‍ಪಿ ಪಕ್ಷ ಕಣಕ್ಕಿಳಿಯುತ್ತಿರುವುದು ಗೆಲುವಿನ ಪ್ರಮುಖ ಉದ್ದೇಶಕ್ಕಾಗಿ ಅಲ್ಲ. ಶೋಷಿತ ಸಮುದಾಯಗಳ ಪರವಾದ ಸಾಮಾಜಿಕ ಚಳವಳಿಗಳನ್ನು ನಡೆಸುವುದು ನಮ್ಮ ಗುರಿಯಾಗಿದೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಭೀಮ ಪುತ್ರಿ ರೇವತಿ ರಾಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚುನಾವಣೆಯ ಮೂಲಕ ಚದುರಿದಂತಿರುವ ಬಿಎಸ್‍ಪಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಟ ಗೊಳಿಸಲಾಗುವುದು ಮತ್ತು ಚುನಾವಣೆಯ ಬಳಿಕ ನಮ್ಮ ಸಾಮಾಜಿಕ ಚಳವಳಿಗಳು ಆರಂಭಗೊಳ್ಳಲಿದೆ. ಬಹುಜನರ ಪಕ್ಷವಾಗಿರುವ ‘ಬಹುಜನ ಸಮಾಜ ಪಕ್ಷ’ದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ದಿವಿಲ್ ಕುಮಾರ್ ಎ.ಎ ಅವರು ಮಾ.20 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ಮೂರ್ನಾಡು ಬಳಿಯ ಪಾಲೇಮಾಡು ಗ್ರಾಮದ ಕಾನ್ಶಿರಾಮ ನಗರದಿಂದ ಪಕ್ಷದ ಮೆರವಣಿಗೆ ಆರಂಭಗೊಳ್ಳಲಿದೆ. ಮೂರ್ನಾಡು, ಹಾಕತ್ತೂರು ಮೂಲಕ ಮಡಿಕೇರಿಗೆ ಆಗಮಿಸಿ, ಸುದರ್ಶನ ವೃತ್ತದ ಫೀ.ಮಾ.ಕೆ.ಎಂ. ಕಾರ್ಯಪ್ಪ ವೃತ್ತ, ಜ.ತಿಮ್ಮಯ್ಯ ವೃತ್ತ, ನಗರ ಠಾಣೆ, ಹಳೇ ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ವೃತ್ತಕ್ಕಾಗಿ ರಾಜಾಸೀಟು…
ಲೇಖಕ: admin
ಸೋಮವಾರಪೇಟೆ ಏ.19 : ಮೀಸಲು ಅರಣ್ಯದಂಚಿನಲ್ಲಿರುವ ನೇರಳೆ ಗ್ರಾಮಕ್ಕೆ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದ ಪ್ರವೇಶ ದ್ವಾರದಲ್ಲೇ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಗ್ರಾಮಸ್ಥರು, ನೇರಳೆ ಗ್ರಾಮದಲ್ಲಿ 30 ಕುಟುಂಬಗಳು ವಾಸವಿದ್ದು, ಕಳೆದ 20 ವರ್ಷಗಳಿಂದ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಬಹುತೇಕ ಕುಟುಂಬಗಳು ಕೂಲಿ ಕೆಲಸ ಮಾಡಿ ಬದುಕುವಂತಹ ಪರಿಸ್ಥಿತಿ ಇದೆ. ಕೃಷಿ ಫಸಲನ್ನು ಕಾಡಾನೆ ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳವಂತ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಾಡಾಂಚಿನಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದರೂ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಉಲ್ಲಾಸ ದೂರಿದ್ದಾರೆ. ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ನೀಡಿದರೂ ಅನುದಾನ ಕಲ್ಪಿಸಿಲ್ಲ. ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ಈ ಕಾರಣದಿಂದ ಚುನಾವಣೆಯ ಬಹಿಷ್ಕಾರದ ನಿರ್ಧರಿಸಲಾಗಿದೆ ಎಂದರು.
ವಿರಾಜಪೇಟೆ ಏ.19 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಸಿ.ಎಸ್. ರವೀಂದ್ರ ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಶಬನಾ ಎಂ.ಶೇಖ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಪೃಥ್ವಿ ಹಾಗೂ ಅಪ್ಪಯ್ಯ ಹಾಜರಿದ್ದರು. 2011ರಲ್ಲಿ ದೇಶದಲ್ಲಿ ಅಣ್ಣಾ ಹಜಾರೆ ನಡೆಸಿದ ಜನಾಂದೋಲನದಿಂದ ಸ್ಫೂರ್ತಿಗೊಂಡು ನಂತರ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷದಲ್ಲಿ ಸೇರ್ಪಡೆಗೊಂಡ ರವೀಂದ್ರ ಅಂದಿನಿಂದ ಇಂದಿನವರೆಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜನರ ಸಮಸ್ಯೆಗಳಿಗೆ ಸುಲಭವಾಗಿ ಸ್ಪಂದಿಸುವ ಇಚ್ಛಾಶಕ್ತಿಯನ್ನು ಹೊಂದಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದರು.
ವಿರಾಜಪೇಟೆ ಏ.19 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎ ಮನ್ಸೂರ್ ಆಲಿ ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ಮೆರವಣಿಗೆಯ ಮೂಲಕ ಬಂದ ಮನ್ಸೂರ್ ಆಲಿ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಶಬಾನಾ ಎಂ.ಶೇಖ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಜೆಡಿಎಸ್‍ನ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಪಾಣತಲೆ ವಿಶ್ವನಾಥ್ ಹಾಜರಿದ್ದರು. :: ಮೆರವಣಿಗೆ :: ನಾಮಪತ್ರ ಸಲ್ಲಿಕೆಗೂ ಮೊದಲು ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿಯಿಂದ ಚುನಾವಣಾಧಿಕಾರಿ ಕಚೇರಿವರೆಗೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ, ವಿರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಎ.ಮಂಜುನಾಥ್, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಸೀರ್ ಮೂರ್ನಾಡು, ಜಿಲ್ಲಾ ಜೆಡಿಎಸ್ ಖಜಾಂಜಿ ಡೆನ್ನಿ…
ಮಡಿಕೇರಿ ಏ.19 : ವಿಧಾನಸಭಾ ಚುನಾವಣೆ ಸಂಬಂಧ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ 4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೆ 13 ಮಂದಿ ನಾಮಪತ್ರ ಸಲ್ಲಿಸಿದ್ದು, 19 ನಾಮಪತ್ರ ಸಲ್ಲಿಕೆಯಾಗಿದೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬುಧವಾರ 3 ಮಂದಿ ನಾಮಪತ್ರ ಸಲ್ಲಿಸಿದ್ದು, ಇದುವರೆಗೆ 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಂಬಂಧಪಟ್ಟ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ಏ.19 : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್-10 ಕುಂಡಾಮೇಸ್ತ್ರಿ ಮತ್ತು ಎಫ್-11 ಗಾಳಿಬೀಡು ಫೀಡರ್ ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಏ.20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕುಂಡಾಮೇಸ್ತ್ರಿ, ಒಣಚಲು, ಗಾಳಿಬೀಡು, ಕಾಲೂರು, ಮೊಣ್ಣಂಗೇರಿ, ಮಾಂದಲ್‍ಪಟ್ಟಿ ರಸ್ತೆ, ದೇವಸ್ತೂರು, ಹೆಬೆಟ್ಟಗೇರಿ, ಅಬ್ಬಿಫಾಲ್ಸ್, ಆರ್‌ಟಿಓ ಹತ್ತಿರ, ನಂದಿಮೊಟ್ಟೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಮಡಿಕೇರಿ ಏ.19 : ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಹಯೋಗದೊಂದಿಗೆ ಅಗ್ನಿ ಅನಾಹುತ ತಡೆಯುವ ಬಗ್ಗೆ ಅಣಕು ಕಾರ್ಯಾಚರಣೆಯು ನಡೆಯಿತು. ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ನೇತೃತ್ವದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರ ಮಾರ್ಗದರ್ಶನದಲ್ಲಿ, ಮಡಿಕೇರಿ ಅಗ್ನಿಶಾಮಕ ಠಾಣೆಯ ಲೀಡ್ ಫೈರ್‍ಮೆನ್ ನಾಗರಾಜ ಪಲ್ಲೇದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ನಂತರ ವಿವಿಧ ರೀತಿಯ ಅಗ್ನಿ ಅನಾಹುತ ಹಾಗೂ ಅಗ್ನಿ ನಂದಿಸುವಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರದರ್ಶನ ಮೂಲಕ ಮಾಹಿತಿ ನೀಡಲಾಯಿತು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಅರ್ಜುನ್ ಸಿಂಗ್ ಹಾಗೂ ಶಿಕ್ಷಕರು ಹಾಜರಿದ್ದರು.
ಮಡಿಕೇರಿ ಏ.19 : ವಿಧಾನಸಭಾ ಚುನಾವಣಾ ಹಿನ್ನೆಲೆ ಭಾರತ ಚುನಾವಣಾ ಆಯೋಗವು ಕೊಡಗು ಜಿಲ್ಲೆಯ 208-ಮಡಿಕೇರಿ ವಿಧಾನಸಭಾ ಕ್ಷೇತ್ರ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರಾಗಿ ವಿಕ್ರಮ್ ಸಿಂಗ್ ಮಲಿಕ್ ಭಾ.ಆ.ಸೇ. ಅವರನ್ನು ನಿಯೋಜಿಸಿದ್ದು, ಏ.18 ರಂದು ಕೊಡಗು ಜಿಲ್ಲೆಯಲ್ಲಿ ವರದಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರನ್ನು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಭೇಟಿ ಮಾಡಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲಿಸಿದರು. ವಿಧಾನಸಭಾ ಚುನಾವಣಾ ಸಂಬಂಧ ಹೆಚ್ಚಿನ ಮಾಹಿತಿಗೆ ಜಿಲ್ಲಾಡಳಿತ ಭವನದ ಮೊದಲ ಮಹಡಿಯ ಕೊಠಡಿ ಸಂಖ್ಯೆ 3 ರಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ನೇರವಾಗಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 6360041101 ಅಥವಾ ಸಾಮಾನ್ಯ ವೀಕ್ಷಕರ ಸಂಪರ್ಕ ಅಧಿಕಾರಿ ಡಾ.ಜೆ.ಆರ್.ಬಾಲಸುಬ್ರಮಣ್ಯಂ 9632953019 ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿದ್ಧಾಪುರ ಏ.19 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚುಮತಗಳಿಂದ ಗೆಲವು ಸಾಧಿಸಲಿ ಎಂದು ಸಿದ್ಧಾಪುರ ಬಿಜೆಪಿಯ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ್ ಅವರ ನೇತೃತ್ವದಲ್ಲಿ ಕೇರಳದ ಮಾಮಾನಿಕ್ಕುನ್ನು ದೇವಿ ಕ್ಷೇತ್ರ ಹಾಗೂ ಪರಶ್ಶಿನಿಕಡವು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಹಿಂದೂ ಮುಖಂಡರಾದ ರದೀಶ್, ಬಿಜೆಪಿ ಯುವಮೋರ್ಚಾ ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ವಿಜೇಶ್, ಯುವ ಮೋರ್ಚಾ ನಗರ ಅಧ್ಯಕ್ಷ ಯತೀಶ್ ರೈ, ಪವನ್, ಮೊದಲಾದವರು ಹಾಜರಿದ್ದರು.
ನಾಪೋಕ್ಲು ಏ.19 : ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಪೆಬ್ಬಟ್ಟಿರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಯ್ಯಂಗೇರಿ ಗ್ರಾ.ಪಂ ವ್ಯಾಪ್ತಿಯ ದೊಡ್ಡ ಪುಲಿಕೋಟು ಗ್ರಾಮದ ಪೆಬ್ಬಟ್ಟಿರ ಕುಟುಂಬಸ್ಥರನ್ನು ಸರ್ಕಾರದ ವಿವಿಧ ಕಾಮಗಾರಿಗಳಿಂದ ವಂಚಿಸಲಾಗಿದೆ ಎಂದು ಆರೋಪಿಸಿದರು. ಕುಟುಂಬದಲ್ಲಿ 70 ಮತದಾರರಿದ್ದು, ಈ ಬಾರಿ ನಾವು ಮತದಾನ ಮಾಡುವುದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಕುಟುಂಬಸ್ಥರು, ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ವರದಿ : ಸಾಜಿದ್ ಪಯ್ಯಡಿ






