ಗೋಣಿಕೊಪ್ಪ NEWS DESK ನ.1 : ಪೊನ್ನಂಪೇಟೆ ತಾಲ್ಲೂಕಿನ ಬ್ರಹ್ಮಗಿರಿ ವನ್ಯಜೀವಿ ವ್ಯಾಪ್ತಿಗೆ ಒಳಪಟ್ಟ ಹನುಮಂತ ಬೆಟ್ಟದಲ್ಲಿ ಪರಿಸರಕ್ಕೆ ಮಾರಕವಾಗಬಲ್ಲ ರೆಸಾರ್ಟ್ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಸ್ಥಳೀಯ ಗ್ರಾಮಸ್ಥರು, ತಕ್ಷಣ ಇದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ. ಶ್ರೀಮಂಗಲದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಕುಪ್ಪಂಡ ಬೋಪಣ್ಣ, ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಕುರ್ಚಿ ಗ್ರಾಮದ ಬ್ರಹ್ಮಗಿರಿ ಅರಣ್ಯ ವಿಭಾಗದ ಕೇವಲ 50 ಮೀಟರ್ ಅಂತರದಲ್ಲಿ ರೆಸಾರ್ಟ್ ಚಟುವಟಿಕೆ ನಡೆಯುತ್ತಿದೆ. ಎರಡು ತಿಂಗಳ ಹಿಂದೆ ಅರಣ್ಯ, ಕಂದಾಯ, ಪ್ರವಾಸೋದ್ಯಮ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕೆ.ಎನ್.ಬೋಸ್ ಮಾದಪ್ಪ ಮಾತನಾಡಿ, ಬ್ರಹ್ಮಗಿರಿ ಬೆಟ್ಟ ಪ್ರದೇಶ ವನ್ಯಜೀವಿ ಧಾಮ ಮತ್ತು ಪಶ್ಚಿಮಘಟ್ಟದ ಬೆಟ್ಟ ಸಾಲುಗಳ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಮುಂದೆ ಅನಾಹುತ ಸಂಭವಿಸಿದರೆ ನಿರಾಪೇಕ್ಷಣಾ ಪತ್ರ ನೀಡಿದ ಅಧಿಕಾರಿಗಳು ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ರೆಸಾರ್ಟ್ ಚಟುವಟಿಕೆಯನ್ನು ಸ್ಥಗಿತಗೊಳಿಸದಿದ್ದಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀಮಂಗಲ ಪಂಚಾಯತಿ ಸದಸ್ಯ ಅಜ್ಜಮಾಡ ಜಯ, ಗ್ರಾಮಸ್ಥರುಗಳಾದ ಅಜ್ಜಮಾಡ ಅಜಿತ್, ಅಜ್ಜಮಾಡ ಬೋಪಣ್ಣ, ಅಜ್ಜಮಾಡ ಮೋಹನ್ ಹಾಗೂ ಅಜ್ಜಮಾಡ ಪ್ರಮೋದ್ ಉಪಸ್ಥಿತರಿದ್ದರು.









