ಮಡಿಕೇರಿ NEWS DESK ಜ.14 : ಶೋಷಿತ ಸಮೂಹಕ್ಕೆ ಸೇರಿದ ವಿದ್ಯಾರ್ಥಿಗಳು ಸಮಾಜದ ವಿವಿಧ ಸ್ತರಗಳಲ್ಲಿ ಅಧಿಕಾರವನ್ನು ಪಡೆಯಲು ಮತ್ತು ಸರಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಆಸಕ್ತರಾಗಬೇಕು. ಅಂತಹ ಹುದ್ದೆಗಳ ಮೂಲಕ ನೂರಾರು ಮಂದಿಗೆ ನೆರವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಡಾ.ಹೆಚ್.ವಿ.ದೇವದಾಸ್ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಮೈತ್ರಿ ಭವನದಲ್ಲಿ ನಡೆದ 35ನೇ ವರ್ಷದ ಕಾರ್ಯಕ್ರಮ ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಂಡು ಈ ಸಮಾಜಕ್ಕೆ ತಮ್ಮಿಂದಾದ ಕೊಡುಗೆಯನ್ನು ನೀಡಲು ವಿದ್ಯಾರ್ಥಿಗಳು ಸಂಕಲ್ಪ ತೊಡಬೇಕು. ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ಹುದ್ದೆಗಳನ್ನು ಪಡೆದುಕೊಂಡು ತಮ್ಮ ಗಳಿಕೆಯ ಒಂದಂಶವನ್ನು ಶಿಕ್ಷಣ ಪಡೆಯಲು ನೆರವು ಬಯಸುವವರಿಗೆ ನೀಡುವಂತಾಗಬೇಕು ಕರೆ ನೀಡಿದರು. ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮಹತ್ತರ ಕಾರ್ಯ ಮಾಡುತ್ತಿದೆ. ಸಂಘಟನೆಯ ಮೂಲಕ ಸನ್ಮಾನ ಪಡೆದ ಹಲವು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂತಹ ಒಂದು ಸನ್ಮಾನ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಪ್ರೇರಣೆಯನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
::: ಸಾಧನೆಗೆ ಜಾತಿ ಅಡ್ಡಿಯಾಗಬಾರದು :::
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಹೆಚ್.ಪಿ.ನಿರ್ಮಲ ಭಾರತ ರಾಷ್ಟç ನಿಂತಿರುವುದೇ ಯುವ ಸಮೂಹದ ಮೇಲೆ. ಇಂತಹ ಯುವ ಸಮೂಹವು ಮನಸ್ಸು ಮಾಡಿದರೆ ರಾಷ್ಟçದ ಚಿತ್ರಣವನ್ನೇ ಬದಲಿಸಬಹುದು. ಯುವ ಸಮೂಹ ಸಾಧನೆ ಮಾಡುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂತಹ ಸಾಧನೆಗೆ ಜಾತಿ ಇಲ್ಲವೆ ಬಡತನ ಎಂದಿಗೂ ಅಡ್ಡಿಯಾಗಬಾರದು. ಯಾವುದೇ ಅಡೆತಡೆಗಳನ್ನು ಮೆಟ್ಟಿ ನಿಂತಾಗಲೆ ಸಾಧನೆಯ ಶಿಖರವೇರಲು ಸಾಧ್ಯವಾಗುತ್ತದೆ ಎಂದರು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಇಡೀ ವಿಶ್ವದಲ್ಲಿ ಭಾರತ ದೇಶ ಗೌರವದ ಸ್ಥಾನ ಪಡೆದುಕೊಳ್ಳಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೆ ಕಾರಣವಾಗಿದೆ. ಇಂತಹ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಟಾನಗೊಂಡಾಗ ಮಾತ್ರ ದೇಶ ಪ್ರಗತಿಯ ಪಥದಲ್ಲಿ ಮುಂದುವರೆಯಲು ಸಾಧ್ಯ. ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತÀÄ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಮಡಿಕೇರಿ ನಗರಸಭಾ ಸದಸ್ಯರು ಹಾಗೂ ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್ ಮಾತನಾಡಿ, ಆಧುನಿಕತೆ ಯುಗದಲ್ಲಿ ಮಕ್ಕಳು ಮೊಬೈಲ್ ಗೀಳು, ದುಶ್ಚಟಗಳಿಗೆ ಬಲಿಯಾಗಿ ಕೆಟ್ಟ ಹಾದಿಯನ್ನು ತುಳಿಯುತ್ತಿರುವ ಅಪಾಯ ನಮ್ಮ ಮುಂದಿದೆ. ಮಕ್ಕಳು ಈಗಿನಿಂದಲೆ ತಮ್ಮ ಉದ್ದೇಶಿತ ಗುರಿ ಸಾಧನೆಗಳತ್ತ ಗಂಭೀರ ಚಿಂತನೆ ಹರಿಸಿ, ಶಿಕ್ಷಣದ ಹಂತದಲ್ಲೆ ತಮ್ಮ ಬದುಕನ್ನು ಭದ್ರ ಪಡಿಸಿಕೊಳ್ಳಬೇಕು. ಕಾಲ ಮಿಂಚಿದ ಬಳಿಕ ಚಿಂತಿಸಿ ಪ್ರಯೋಜನವಿಲ್ಲ ಎಂದರು. ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಮಾತನಾಡಿ, ಶೋಷಿತ ದಲಿತ ಸಮೂಹ ತಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಬೇಕು. ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಡಿಕೇರಿ ತಾಲ್ಲೂಕು ದಸಂಸ ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅವಮಾನಗಳನ್ನು ಎದುರಿಸಿಕೊಂಡೇ ಬಂದವರು. ಅವರು ತಮಗೆ ಎದುರಾದ ಅವಮಾನಕ್ಕೆ ಪ್ರತಿಯಾಗಿ ಹೆಚ್ಚು ಹೆಚ್ಚು ಓದಿನ ಮೂಲಕ ಅಗಾಧ ಜ್ಞಾನ ಸಂಪತ್ತನ್ನು ಗಳಿಸಿ ಸರ್ವ ಮಾನ್ಯರಾದವರು. ಅದೇ ರೀತಿ ಶೋಷಿತ ಸಮೂಹದ ಮಕ್ಕಳು ತಮಗೆ ಎದುರಾಗುವ ಅವಮಾನಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕೆಂದು ಕರೆ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ದಸಂಸ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ಸಂಘಟನೆಯ ಮೂಲಕ ಇಂತಹ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸುವ ಮೂಲಕ ಶೋಷಿತ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆ ನೀಡುವುದೇ ಆಗಿದೆ. ಸನ್ಮಾನ ಸ್ವೀಕರಿಸಿದ ಮಕ್ಕಳು ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆನ್ನುವುದು ಸಂಘಟನೆಯ ಉದ್ದೇಶವೆಂದು ತಿಳಿಸಿದರು.
::: ಸನ್ಮಾನ ::: ಜಿಲ್ಲೆಯ ವಿವಿಧೆಡೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಅತಿಥಿ ಗಣ್ಯರು ಸನ್ಮಾನಿಸಿ ಪ್ರೋತಾಹಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಅತಿಥಿಗಳಾಗಿ ಸುಧಾ ವರದರಾಜ್, ಪೊನ್ನಂಪೇಟೆ ತಾಲ್ಲೂಕು ದಸಂಸ ಸಂಚಾಲಕ ಹೆಚ್.ಆರ್. ಜಗದೀಶ್, ದಸಂಸ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಂತೋಷ್ ಕುಮಾರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಜೆ.ಈರಪ್ಪ ಉಪಸ್ಥಿತರಿದ್ದರು. ಸಂಘಟನೆಯ ಪ್ರಮುಖ ಅಜಿತ್ ಕಾರ್ಯಪ್ಪ ಅವರು ಆರಂಭದಲ್ಲಿ ಬುದ್ಧ ವಂದನೆ ನಡೆಸಿಕೊಟ್ಟು, ಸ್ವಾಗತಿಸಿದರು.