ನ.17ರಿಂದ ಕಾಲೇಜುಗಳು ಆರಂಭ

24/10/2020

ಬೆಂಗಳೂರು ಅ.24 : ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನಾರಂಭಕ್ಕೆ ಸಂಬಂಧಿಸಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನ.17ರಿಂದ ಯುಜಿಸಿ ಮಾರ್ಗಸೂಚಿಯ ಅನುಸಾರ ಕಾಲೇಜು ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

“ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವೆಂಬರ್ 17 ರಿಂದ ಪದವಿ ಕಾಲೇಜು ಪುನಃ ತೆರೆಯಲು ನಿರ್ಧರಿಸಲಾಯಿತು. ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಪದವಿ ಕಾಲೇಜುಗಳೆಲ್ಲವೂ ಮತ್ತೆ ಪ್ರಾರಂಭವಾಗಲಿವೆ” ಎಂದು ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ್ ಹೇಳಿದರು.
ಮೊದಲಿಗೆ ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಯೂ ಕಲಿಯಬಹುದು ಇಲ್ಲವೇ ಆನ್ ಲೈನ್ ತರಗತಿಗೂ ಹಾಜರಾಗಬಹುದು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತರಗತಿಗಳಲ್ಲಿ ಎಲ್ಲಾ ಬಗೆಯ ಸುರಕ್ಷಿತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಹೇಳಿದ್ದಾರೆ.