ಕೋವಿಡ್ ಕರಿನೆರಳಿನ ನಡುವೆ ಮಡಿಕೇರಿ ದಸರಾಕ್ಕೆ ತೆರೆ : ಕಳಸ ಮೆರವಣಿಗೆಗೆ ಸೀಮಿತವಾದ ಜನೋತ್ಸವ

27/10/2020

ಮಡಿಕೇರಿ ಅ.27 : ಮಡಿಕೇರಿ ದಸರಾ ಮಹೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೋವಿಡ್ ಕರಿ ನೆರಳಿನ ನಡುವೆ ಅತ್ಯಂತ ಸರಳ ರೀತಿಯಲ್ಲಿ ವಿಜಯ ದಶಮಿ ಆಚರಣೆ ನಡೆಯಿತು. ನವರಾತ್ರಿಯ ಕೊನೆಯ ದಿನವಾದ ಸೋಮವಾರ ಒಂದು ಸಣ್ಣ ದೇವರ ಮೂರ್ತಿ ಮತ್ತು ಕಳಸ ಮೆರವಣಿಗೆಗಷ್ಟೇ ಜನೋತ್ಸವ ಸೀಮಿತವಾಯಿತು.
ದಶಮಂಟಪ ಶೋಭಾಯಾತ್ರೆಗೆ ಅವಕಾಶ ನೀಡದೆ ಇದ್ದುದರಿಂದ ಚಿಕ್ಕ ವಾಹನದಲ್ಲಿ ಒಂದು ಉತ್ಸವ ಮೂರ್ತಿ ಹಾಗೂ ಕಳಸ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು. ಯಾವುದೇ ಅದ್ದೂರಿತನವಿಲ್ಲದೆ ನೀರಸವಾಗಿ ಮಡಿಕೇರಿ ದಸರಾ ಕೊನೆಗೊಂಡಿತು. ನಗರದ ದಶ ಮಂಟಪ ಸಮಿತಿಗಳು ಸಣ್ಣ ಸಣ್ಣ ಮಂಟಪಗಳೊಂದಿಗೆ ಮುಂದೆ ಸಾಗಿದವು.
ಮಡಿಕೇರಿ ದಸರಾದಲ್ಲಿ 10 ದೇವಾಲಯಗಳ ಮಂಟಪಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವುದಲ್ಲದೇ, ಪೌರಾಣಿಕ ಕಥಾ ಹಂದರದ ವಿವಿಧ ಸಾರಾಂಶಗಳನ್ನು ಮಂಟಪಗಳಿಗೆ ಅಳವಡಿಸಿಕೊಂಡು ಚಲನ ವಲನಗಳ ಮೂಲಕ ವಿಜಯ ದಶಮಿಯ ಸಂದೇಶ ನೀಡುತ್ತಿದ್ದವು. ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಪೇಟೆ ರಾಮ ಮಂದಿರ. ಶ್ರೀ ಕೋಟೆ ಗಣಪತಿ, ದೇಚೂರು ಶ್ರೀರಾಮ ಮಂದಿರ, ಕರವಲೆ ಭಗವತಿ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡ ರಾಮ ಮಂಟಪಗಳು ಶೋಭಾ ಯಾತ್ರೆಯಲ್ಲಿ ಸಾಗುತ್ತಿದ್ದವು. ಈ ಪೈಕಿ ಅತ್ಯಂತ ವ್ಯವಸ್ಥಿತ ಚಲನ ವಲನ ಹಾಗೂ ಜನಾಕರ್ಷಣೆ ಗಳಿಸುವ ಮಂಟಪಕ್ಕೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಕೂಡ ನೀಡಲಾಗುತ್ತಿತ್ತು. ಈ ಬಹುಮಾನ ಪಡೆಯುವ ಸಲುವಾಗಿಯೇ ದಶ ಮಂಟಪಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಚಿಕ್ಕ ವಾಹನದಲ್ಲಿ ಒಂದು ಉತ್ಸವ ಮೂರ್ತಿಯನ್ನು ಅಳವಡಿಸಿಕೊಂಡು ಸಂಪ್ರದಾಯದಂತೆ ಮಂಟಪಗಳು ಕಳಸ ಮೆರವಣಿಗೆಯಲ್ಲಿ ಸಾಗಿದವು.
ದಸರಾಕ್ಕೆ ಜನ ಸೇರುವುದನ್ನು ತಡೆಯುವ ಸಲುವಾಗಿ ಮಡಿಕೇರಿಯ ಎಲ್ಲಾ ಪ್ರವಾಸಿತಾಣಗಳನ್ನು ಬಂದ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಎರಡು ದಿನ ನಿಷೇಧಿಸಲಾಗಿತ್ತು.
ನಗರದ ಶಕ್ತಿ ದೇವತೆಗಳಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀಕಂಚಿ ಕಾಮಾಕ್ಷಿಯಮ್ಮ ಕರಗಗಳು ರಾತ್ರಿ ಸಂಪ್ರದಾಯದಂತೆ ಸಾಗಿ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾಕ್ಕೆ ತೆರೆ ಎಳೆಯಲಾಯಿತು.