ಮಡಿಕೇರಿ ನಗರ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ವಿರೋಧ

October 29, 2020

ಮಡಿಕೇರಿ ಅ.29 : ಮಡಿಕೇರಿ ನಗರದ ಹೃದಯ ಭಾಗದಲ್ಲಿದ್ದ ನಗರ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಪ್ಯೂಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಅನೇಕ ವರ್ಷಗಳಿಂದ ನಗರದಲ್ಲಿದ್ದ ಠಾಣೆಯನ್ನು ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಸ್ಥಳಾಂತರಿಸಿದ್ದು, ಇದರಿಂದ ಜನನಿಬಿಡ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ನಗರಕ್ಕೆ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ದಂಧೆ ಮತ್ತು ಗಾಂಜಾ ವ್ಯಸನಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪೋಲಿ, ಪುಂಡರ ಹಾವಳಿಯಿಂದ ನಗರವನ್ನು ರಕ್ಷಿಸಲು ನಗರದ ಮಧ್ಯ ಭಾಗದಲ್ಲೇ ಠಾಣೆ ಇರುವುದು ಸೂಕ್ತವೆಂದು ಹೇಳಿದ್ದಾರೆ.
ಪಕ್ಕದಲ್ಲೇ ಠಾಣೆ ಇದ್ದರೆÉ ತಪ್ಪು ಮಾಡುವ ವ್ಯಕ್ತಿಗಳಿಗೂ ಆತಂಕವಿರುತ್ತದೆ. ಆದರೆ ಇದೀಗ ಕಟ್ಟಡ ಶಿಥಿಲಾವಸ್ಥೆಗೊಂಡಿದೆ ಎನ್ನುವ ಕಾರಣ ನೀಡಿ ದೂರದ ಪ್ರದೇಶಕ್ಕೆ ಠಾಣೆಯನ್ನು ಸ್ಥಳಾಂತರಿಸಲಾಗಿದೆ. ಇದರಿಂದ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡವರಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತ್ತಾಗುತ್ತದೆ. ದೂರು ಸಲ್ಲಿಸಲು ದೂರದ ಪ್ರದೇಶಕ್ಕೆ ತೆರಳಬೇಕಾದÀ ಅನಿವಾರ್ಯತೆ ಸಾರ್ವಜನಿಕರಿಗೆ ಎದುರಾಗಲಿದೆ. ಮಾದಕ ವಸ್ತುಗಳ ವ್ಯಸನಿಗಳು ಹಾಗೂ ಕಾನೂನು ಕೈಗೆತ್ತಿಕೊಳ್ಳುವವರು ಪೊಲೀಸ್ ಠಾಣೆ ಇಲ್ಲದ ನಗರದಲ್ಲಿ ರಾಜಾರೋಷವಾಗಿ ಅಲೆದಾಡುವ ಎಲ್ಲಾ ಸಾಧ್ಯತೆಗಳಿದೆ.
ಮುಖ್ಯ ರಸ್ತೆಯಲ್ಲೇ ಠಾಣೆ ಇದ್ದಾಗ ಪೊಲೀಸರು ಯಾವುದೇ ಅಪರಾಧ ಪ್ರಕರಣಗಳು ನಡೆದಾಗಲೂ ತಕ್ಷಣ ಸ್ಪಂದಿಸಲು ಅವಕಾಶವಿತ್ತು. ಆದರೆ ಇದೀಗ ನಗರದಿಂದ ದೂರದ ಪ್ರದೇಶಕ್ಕೆ ಠಾಣೆ ಸ್ಥಳಾಂತರಗೊಂಡಿದ್ದು, ಇದರಿಂದ ಆಗುವ ಕಾನೂನು ಸುವ್ಯವಸ್ಥೆಯ ತೊಡಕುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೊದಲು ಅರಿತುಕೊಳ್ಳಬೇಕೆಂದು ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ.
ಹಳೆಯ ಕಟ್ಟಡದ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ನಗರದ ಹೃದಯ ಭಾಗದಲ್ಲೇ ಪೊಲೀಸ್ ಠಾಣೆ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಬಸ್ ನಿಲ್ದಾಣ ಮತ್ತು ಜಿಲ್ಲಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಮಹಿಳಾ ಪೊಲೀಸರನ್ನು ಕೂಡ ನಿಯೋಜಿಸಬೇಕು, ನಗರದ ಬೀದಿದೀಪಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಬೇಕೆಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.

error: Content is protected !!