ಕೊಡಗಿನಲ್ಲಿ ಕೋವಿಡ್ : ಸೋಂಕಿತರ ಪ್ರಮಾಣ ಶೇ.0.2 ಕ್ಕೆ ಇಳಿಕೆ

29/10/2020

ಮಡಿಕೇರಿ ಅ.29 : ರಾಜ್ಯಾದ್ಯಾಂತ ಕೋವಿಡ್-19 ದೃಢೀಕೃತ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿದ್ದು ಜಿಲ್ಲೆಯಲ್ಲಿಯೂ ಸಹ ಕೋವಿಡ್-19 ದೃಢೀಕೃತ ಪ್ರಕರಣಗಳು ಇಳಿಮುಖಗೊಂಡಿವೆ.
ರಾಜ್ಯದಲ್ಲಿಯೇ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ದೃಢೀಕೃತ ಪ್ರಮಾಣ ಅಕ್ಟೋಬರ್ 28 ರಂದು 0.2 ಶೇ. ಗಿಂತಲೂ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಪ್ರತಿದಿನ ಸರ್ಕಾರ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ಕೋವಿಡ್ ಪರೀಕ್ಷೆ ಮಾಡಿದ ಶೇ.108 ರಲ್ಲಿ ಶೇ.0.2 ಮಾತ್ರ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್-19 ಸಂಬಂಧ ಹಲವಾರು ಮುಂಜಾಗೃತ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರೊಂದಿಗೆ ಜಿಲ್ಲೆಯಾದ್ಯಂತ ಕೋವಿಡ್-19 ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಸರ್ಕಾರದ ನಿರ್ದೇಶನದಂತೆ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಹೆಚ್ಚಿನ ಪರೀಕ್ಷೆಯನ್ನು ನಡೆಸುತ್ತಿದ್ದರೂ ಸಹ ಸೋಂಕು ಧೃಢೀಕೃತ ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿದ್ದು ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಮೈ ಮರೆಯದೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕಡ್ಡಾಯವಾಗಿ ಸಾರ್ವಜನಿಕರು ಮಾಸ್ಕ್ ಧಾರಣೆ ಮಾಡುವುದು, ಸಾಮಾಜಿಕ ಅಂತರವನ್ನು ಪಾಲಿಸುವುದು ಮತ್ತು ಆಗಾಗ ಕೈಗಳನ್ನು ಸೋಪು ಮತ್ತು ನೀರು ಬಳಸಿ ಅಥವಾ ಸ್ಯಾನಿಟೈಸರ್ ಬಳಕೆಯಿಂದ ಸ್ವಚ್ಛಗೊಳಿಸುವ ಮೂಲಕ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೋವಿಡ್-19 ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.