ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಗಲು ಗನಸು : ಸಚಿವ ಸೋಮಣ್ಣ ವ್ಯಂಗ್ಯ

01/11/2020

ಮಡಿಕೇರಿ ನ.1 : ರಾಜ್ಯದ ಶಿರಾ ಮತ್ತು ಆರ್‍ಆರ್ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎನ್ನುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಗಲು ಗನಸಾಗಿದ್ದು, ಅವರಿಗೆ ರಾತ್ರಿ ನಿದ್ರೆ ಬರುವುದಿಲ್ಲವಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೋಲುತ್ತದೆ ಎನ್ನುವ ಮಾಹಿತಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ದೊರಕಿದ್ದು, ಇದರಿಂದ ಹತಾಶರಾಗಿ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಗೆ ಉತ್ತರಿಸಿದ ವಿ.ಸೋಮಣ್ಣ ಅವರು, ಬಿಜೆಪಿ ಪಕ್ಷದಲ್ಲಿ ಯತ್ನಾಳ್ ಅವರು ಮಾತ್ರ ಸಿಎಂ ಬದಲಾವಣೆಯ ಬಗ್ಗೆ ಮಾತನಾಡಿದ್ದು, ಅವರು ಈಗಾಗÀಲೆ ಈ ಬಗ್ಗೆ ಹೇಳಿಕೆ ನೀಡಿ, ತಮ್ಮ ಭಾಗದ ಕೆಲಸ ಕಾರ್ಯಗಳು ನಡೆಯಬೇಕೆನ್ನುವ ಉದ್ದೇಶದಿಂದಷ್ಟೆ ಇಂತಹ ಹೇಳಿಕೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳ ಬದಲಾವಣೆಯ ಸಮಸ್ಯೆಗಳೇನು ಇಲ್ಲವೆಂದು ಸ್ಪಷ್ಟಪಡಿಸಿದರು.
ಪ್ರತ್ಯೇಕತೆಯ ಕೂಗಿನ ವಿಚಾರ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪ್ರತ್ಯೇಕತೆಯ ಕೂಗು ಬಂದಿದೆಯಷ್ಟೆ. ಈಗಾಗಲೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಇಂತಹ ಕೂಗಿನ ಹಿಂದಿನ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದರು.