ಸೋಮವಾರಪೇಟೆ : ಕೊರೊನಾ ವೈರಸ್ ನಿಗ್ರಹಕ್ಕಾಗಿ ವಿಶೇಷ ಪೂಜೆ

May 16, 2021

ಸೋಮವಾರಪೇಟೆ ಮೇ 16 : ಕೊರೊನಾ ವೈರಸ್ ನಿಗ್ರಹಕ್ಕಾಗಿ ಸೋಮವಾರಪೇಟೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊರೊನಾ ಸಂಕಷ್ಟ ದೂರವಾಗಿ ಸಮಾಜದಲ್ಲಿ ಆರೋಗ್ಯಪೂರ್ಣ ವಾತಾವರಣ ನೆಲೆಸಲಿ ಎಂದು ಪಟ್ಟಣದ ಬಸವೇಶ್ವರ, ಸೋಮೇಶ್ವರ, ಅಯ್ಯಪ್ಪ ಸ್ವಾಮಿ, ಮುತ್ತಪ್ಪಸ್ವಾಮಿ, ವಿದ್ಯಾಗಣಪತಿ, ಆಂಜನೇಯ, ಕಟ್ಟೆಬಸವೇಶ್ವರ, ಹಾನಗಲ್ಲು ಗಣಪತಿ ದೇವಾಲಯ, ಶಾಂತಳ್ಳಿಯ ಕುಮಾರಲಿಂಗೇಶ್ವರ, ಗೆಜ್ಜೆಹಣಕೋಡಿನ ಸೋಮೇಶ್ವರ, ಸೇರಿದಂತೆ ವಿರಾಜಪೇಟೆಯ ಅರಮೇರಿ ಕಳಂಚೇರಿ, ಕೊಡ್ಲಿಪೇಟೆಯ ಕಿರಿಕೊಡ್ಲಿ, ಕಲ್ಲು ಮಠ, ಕಲ್ಲಳ್ಳಿ, ಮುದ್ದಿನಕಟ್ಟೆ, ಶಿಡಿಗಳಲೆ, ಶ್ರೀಕ್ಷೇತ್ರ ಮನೆ ಹಳ್ಳಿ ಮಠಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು.
::: ಜಗಜ್ಯೋತಿ ಬಸವೇಶ್ವರರಿಗೆ ನಮನ :::
ಬಸವೇಶ್ವರರ 888ನೇ ಜಯಂತಿ ಅಂಗವಾಗಿ ಇಲ್ಲಿನ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ತಮ್ಮ ಅನುಭವ ಮಂಟಪದ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ಸಮಾನತೆಯನ್ನು ತಂದುಕೊಟ್ಟ ಬಸವೇಶ್ವರರು ಸಮಾಜದಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಅವಿರತ ಶ್ರಮಿಸಿದರು ಎಂದರು.
ಸರ್ವರೂ ಸಮಾನರು ಎಂಬ ತತ್ವವನ್ನು ಬೋಧಿಸಿದ ಶರಣ ಶ್ರೇಷ್ಠ ಬಸವೇಶ್ವರರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧೀಶರಾದ ಶ್ರೀಸದಾಶಿವ ಸ್ವಾಮೀಜಿ ಮಾತನಾಡಿ, ಬಸವೇಶ್ವರರ ಆದರ್ಶಗಳು ಸಾರ್ವಕಾಲಿಕವಾಗಿದ್ದು, ಸಮಾಜದಲ್ಲಿ ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಮೇರು ವ್ಯಕ್ತಿ ಎಂದು ಬಣ್ಣಿಸಿದರು. ಇದೇ ಸಂದರ್ಭ ಸೋಮವಾರಪೇಟೆಯ ಆಂಬ್ಯುಲೆನ್ಸ್ ಚಾಲಕರು, ಸೇವಾ ವಾಹನದ ಚಾಲಕರಿಗೆ ಪ.ಪಂ ನಿಂದ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.
ತಾಲೂಕು ತಹಸೀಲ್ದಾರ್ ಗೋವಿಂದರಾಜು, ಪ.ಪಂ ಮುಖ್ಯಾಧಿಕಾರಿ ನಾಚಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಪ.ಪಂ. ಉಪಾಧ್ಯಕ್ಷ ಸಂಜೀವ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!