ಎಲ್ಲಾ ಆಸ್ಪತ್ರೆಗಳಿಗೆ ಸಿ.ಸಿ ಕ್ಯಾಮೆರಾ ಅಳವಡಿಸಿ : ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ

16/05/2021

ಸೋಮವಾರಪೇಟೆ ಮೇ 16 : ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕೂಡಲೇ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.
ಸೋಮವಾರಪೇಟೆ ಆಸ್ಪತ್ರೆಯಲ್ಲಿನ ಕೋವಿಡ್ ಸೆಂಟರ್‌ಗೆ ಭಾನುವಾರ ಭೇಟಿ ನೀಡಿದ ಸಂದರ್ಭ ಆಸ್ಪತ್ರೆಯಲ್ಲಿ ಐಸಿಯೂ ಘಟಕವಿದ್ದು, ತಜ್ಞ ವೈದ್ಯರಿಲ್ಲದ ಬಗ್ಗೆ ಮಾಹಿತಿ ಪಡೆದರು.
ಆಸ್ಪತ್ರೆಗೆ ಚಿಕಿತ್ಸಕರೊಬ್ಬರನ್ನು ತಕ್ಷಣ ನೇಮಕ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರಿಗೆ ಸೂಚಿಸಿದರು.
ಕೋವಿಡ್ ಸೆಂಟರ್‌ನಲ್ಲಿ 10 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ರವೀಂದ್ರ ಮಾಹಿತಿ ನೀಡಿದರು. ರೋಗಿಗಳಿಗೆ ಪೋಷಕಾಂಶಯುಕ್ತ ಗುಣಮಟ್ಟದ ಆಹಾರ ನೀಡಬೇಕು. ಉಪವಾಸ ಬೀಳದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಆಸ್ಪತ್ರೆ ಸುತ್ತ ಮುತ್ತಲಿನ ಗುಂಡಿಗಳನ್ನು ಕೂಡಲೇ ಮುಚ್ಚಿ ಸರಾಗ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ತಹಶೀಲ್ದಾರ್ ಗೋವಿಂದರಾಜು ಅವರಿಗೆ ತಿಳಿಸಿದರು. ಸೇವಾ ಭಾರತಿ ಸದಸ್ಯ ಮಹೇಶ್ ತಿಮ್ಮಯ್ಯ ಅವರು ಕರ್ಕಳ್ಳಿ ಗ್ರಾಮದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿಲಿಕಾನ್ ಛೇಂಬರ್ ಮಾಡಿಸಿಕೊಡುವಂತೆ ಮನವಿ ಮಾಡಿದರು. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಸಚಿವರು ಸೂಚಿಸಿದರು.
ಪಡಿತರ ಚೀಟಿ ರದ್ದಾಗಿ ಪಡಿತರ ಸಿಗುತ್ತಿಲ್ಲ. ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದೇವೆ, ಕೂಡಲೇ ವ್ಯವಸ್ಥೆ ಮಾಡಿಕೊಡಬೇಕೆಂದು ಕೊಡಗು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್‌ಮೂರ್ತಿ ಮನವಿ ಮಾಡಿದರು. ಯಾರೊಬ್ಬರು ಹಸಿವಿನಿಂದ ಇರಬಾರದು ಎಂದು ರಾಜ್ಯ ಸರ್ಕಾರ ಉಚಿತ ಪಡಿತರ ನೀಡುತ್ತಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರೂ, ಇನ್ನಿತರ ಕಾರಣಗಳಿಂದ ಪಡಿತರ ಸಿಗದವರಿಗೆ ಅರ್ಜಿ ಸ್ವೀಕರಿಸಿ ಪಡಿತರ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್‌ಪಿ ಶೈಲೇಂದ್ರ ಮತ್ತಿತರರು ಇದ್ದರು.