ಪಡಿತರ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಮನವಿ

ಮಡಿಕೇರಿ ಮೇ 5 : ಕೇಂದ್ರ ಸರ್ಕಾರದ ಪಿಎಂಜಿಕೆಎವೈ ಯೋಜನೆಯಡಿ ಮೇ ಮಾಹೆಯಲ್ಲಿ ಎಎವೈ ಹಾಗೂ ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಕುಟುಂಬದ ಪ್ರತೀ ಸದಸ್ಯರಿಗೆ 10 ಕೆ.ಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು.
ಎಎವೈ ಮತ್ತು ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಕುಟುಂಬಗಳ ಪ್ರತೀ ಪಡಿತರ ಚೀಟಿಗೆ 1 ಕೆ.ಜಿ ತೊಗರಿ ಬೇಳೆಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಯಾವುದೇ ವರ್ಗದ ಪಡಿತರ ಚೀಟಿ ಹೊಂದದ ಕುಟುಂಬಗಳು ಬಿಪಿಎಲ್(ಆದ್ಯತಾ) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಕುಟುಂಬಗಳಿಗೂ ಅಕ್ಕಿ ವಿತರಣೆ ಮಾಡುತ್ತಿದ್ದು, ಪ್ರತೀ ಪಡಿತರ ಚೀಟಿ ಅರ್ಜಿಗೆ 10 ಕೆ.ಜಿ ಅಕ್ಕಿಯಂತೆ ಉಚಿತವಾಗಿ ವಿತರಣೆ ಮಾಡಲಾಗುವುದು. ಪಡಿತರಕ್ಕಾಗಿ ದತ್ತಾಂಶದಲ್ಲಿ ನೋಂದಾವಣೆ ಮಾಡಿಕೊಳ್ಳದಂತಹ ಎಪಿಎಲ್ (ಆದ್ಯತೇತರ) ಪಡಿತರ ಚೀಟಿ ವರ್ಗದವರಿಗೂ ಸಹ ಸರ್ಕಾರದಿಂದ ಅಕ್ಕಿ ಬಿಡುಗಡೆಯಾಗಿದ್ದು, 1 ಯೂನಿಟ್‍ವುಳ್ಳ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ 2 ಕ್ಕಿಂತ ಹೆಚ್ಚಿನ ಯೂನಿಟ್‍ವುಳ್ಳ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತೀ ಕೆ.ಜಿಗೆ ರೂ 15 ದರವನ್ನು ಪಡೆದು ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.
ಕೋವಿಡ್-19 ವೈರಸ್ ಹರಡುವ ಭೀತಿ ಹಿನ್ನೆಲೆ ಜಿಲ್ಲೆಯ ಆದ್ಯತಾ(ಬಿಪಿಎಲ್ ಮತ್ತು ಎಎವೈ) ಪಡಿತರ ಚೀಟಿಗಳ ಕುಟುಂಬದ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂಕು ನುಗ್ಗಲಿಗೆ ಅವಕಾಶ ನೀಡದೆ ಪಡಿತರ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.