ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಆಕ್ಷೇಪ

13/05/2020

ಬೆಂಗಳೂರು ಮೇ 12 : ಎಪಿಎಂಸಿ ಕಾಯಿದೆಯ ತಿದ್ದುಪಡಿಗಾಗಿ ಕೊರೋನಾ ಸಮಯದಲ್ಲಿ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ತರುವ ಅವಶ್ಯಕತೆ ಇದೆಯೇ? ಎಂದು ಸರ್ಕಾರವನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಈ ಕಾಯಿದೆ ಜಾರಿಯಿಂದ ರೈತರು ಉದ್ಧಾರವಾಗುವುದಿಲ್ಲ ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಉಳಿಯಬೇಕಾದರೆ ಈ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಪ್ರಧಾನಿಗಳ ಆದೇಶದ ಮೇರೆಗೆ ಕಾಯಿದೆ ಜಾರಿ ಮಾಡಲಾಗಿದೆ.
ತಿದ್ದುಪಡಿ ಮಾಡುವುದರಿಂದ ಸರ್ಕಾರಕ್ಕೆ 600 ಕೋಟಿ ನಷ್ಟವಾಗುತ್ತದೆ ಎಂದಿದ್ದಾರೆ.
ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಲು ಈ ಕಾನೂನು ತರಲು ಮುಂದಾಗಿದ್ದಾರೆ. ಕಾಯಿದೆ ಜಾರಿಗೂ ಮುನ್ನ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆದು ಚರ್ಚೆ ಮಾಡಲಿ. ತರಾತುರಿಯಲ್ಲಿ ಕಾಯಿದೆ ಜಾರಿಗೆ ತರುವುದು ಬೇಡ ಎಂದು ಆಗ್ರಹಿಸಿದರು.