ಅಂಫಾನ್ ಚಂಡಮಾರುತಕ್ಕೆ 72 ಬಲಿ

22/05/2020

ಕೋಲ್ಕತಾ ಮೇ 21 : ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಅಂಫಾನ್ ಚಂಡಮಾರುತ ಸಂಬಂಧಿ ಅವಘಡಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ.
72 ಮಂದಿ ಪೈಕಿ 15 ಮಂದಿ ಕೋಲ್ಕತ್ತಾದಲ್ಲಿಯೇ ಮೃತಪಟ್ಟಿದ್ದು, ಇತರೆ ಐದು ಜಿಲ್ಲೆಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ ಎಂದು ಮಮತಾ ಬ್ಯಾನರ್ಜಿಅವರು ತಿಳಿಸಿದ್ದಾರೆ.
ಅಂಫಾನ್ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಅಲ್ಲದೆ ಅಂಫಾನ್ ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀದಿ ಮನವಿ ಮಾಡಿದ್ದಾರೆ.
ಗರಿಷ್ಠ ಗಾಳಿಯ ವೇಗ 190 ಕಿ.ಮೀ ಮತ್ತು ಧಾರಾಕಾರ ಮಳೆಯೊಂದಿಗೆ ಅಬ್ಬರಿಸುತ್ತಿರುವ ಅಫಾನ್ ನಿಂದ ಸುಂದರಬನ್ ಪ್ರದೇಶ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ತತ್ತರಿಸಿವೆ.
ಒಡಿಶಾದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಆತಂಕ ಸೃಷ್ಟಿಸಿದ್ದು, ಸಂತ್ರಸ್ತರ ಸ್ಥಳಾಂತರ ಕಾರ್ಯ ಭರದಿಂದ ಸಾಗಿದೆ.