ಕೊರೋನಾ ಸೋಂಕು ಹರಡದಂತೆ ತಡೆಯುವಲ್ಲಿ ಸರ್ಕಾರಗಳು ವಿಫಲ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಆರೋಪ

26/05/2020

ಮಡಿಕೇರಿ ಮೇ 26 : ಕೊರೋನಾ ಸೋಂಕು ಹರಡದಂತೆ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಜನರ ಜೀವನದ ಜೊತೆ ಸರ್ಕಾರಗಳು ಚೆಲ್ಲಾಟವಾಡುತ್ತಿದ್ದು, ಜಾಗಟೆ ಬಾರಿಸುವುದು ಮತ್ತು ದೀಪ ಹಚ್ಚುವ ಮೌಡ್ಯದಿಂದ ರೋಗಗಳನ್ನು ಶಮನ ಮಾಡಲು ಸಾಧ್ಯವಿಲ್ಲ. ಔಷಧದ ಶಕ್ತಿಯಿಂದ ಮಾತ್ರ ಆರೋಗ್ಯವನ್ನು ಕಾಪಾಡಬಹುದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಲಿ ಎಂದು ಮಂಜುನಾಥ್ ಕುಮಾರ್ ಹೇಳಿದರು.
ಜನರ ಭಾವನೆಯೊಂದಿಗೆ ಚೆಲ್ಲಾಟವಾಡಿ ಸುಳ್ಳು ಭರವಸೆಗಳ ಮೂಲಕ ಮತಗಳಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟ ಅವರು, ಕೊರೋನಾ ವಿರುದ್ಧ ಕಾರ್ಯಾಚರಿಸುವಲ್ಲಿ ವಿಫಲರಾಗಿರುವ ಪ್ರಧಾನಮಂತ್ರಿಗಳು ಕೈಚೆಲ್ಲಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ವೈರಸ್‍ನೊಂದಿಗೆ ಹೊಂದಿಕೊಂಡು ಬದುಕಿ ಎಂದು ಹೇಳಿಕೆ ನೀಡುವುದು ಹತಾಷ ಮನೋಭಾವನೆಗೆ ಸಾಕ್ಷಿಯಾಗಿದೆ. ದೇಶದ ರೈತರ ಸ್ಥಿತಿ ಇಂದು ಚಿಂತಾಜನಕವಾಗಿದೆ. ಜನಸಾಮಾನ್ಯರ, ರೈತರ ಕಷ್ಟಗಳಿಗೆ ಸ್ಪಂದಿಸುವ ಶಕ್ತಿಯನ್ನು ಸರ್ಕಾರ ಕಳೆದುಕೊಂಡಿದೆ. ರೈತರ ಸಾಲ ವಸೂಲಿ ಸಧ್ಯಕ್ಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದ ಬೆನ್ನಲೆ ಸಾಲ ಮರುಪಾವತಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಮಂಜುನಾಥ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಹಾಗೂ ಕಾರ್ಮಿಕರ ಹಿತವನ್ನು ಕಾಯದಿದ್ದಲ್ಲಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಗಳ ಪ್ಯಾಕೇಜ್‍ನ್ನು ಘೋಷಿಸಿರುವುದಾಗಿ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ ಇಲ್ಲಿಯವರೆಗೆ ಪತ್ರಿಕಾ ರಂಗಕ್ಕೆ, ದೃಶ್ಯ ಮಾಧ್ಯಮಕ್ಕೆ ಮತ್ತು ಪತ್ರಕರ್ತರಿಗೆ ಯಾವುದೇ ಪ್ಯಾಕೇಜ್‍ನ್ನು ಘೋಷಣೆ ಮಾಡಿಲ್ಲವೆಂದು ಟೀಕಿಸಿದರು.
ಲಾಕ್‍ಡೌನ್‍ನಿಂದಾಗಿ ಪತ್ರಿಕಾ ಸಂಸ್ಥೆಗಳು ಹಾಗೂ ಟಿವಿ ಮಾಧ್ಯಮಗಳು ಅಪಾರ ನಷ್ಟವನ್ನು ಅನುಭವಿಸಿವೆ, ಪತ್ರಕರ್ತರು ಕೂಡ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಕ್ಷಣ ಸುದ್ದಿಲೋಕದ ಮಂದಿಗೂ ಪರಿಹಾರ ಘೋಷಿಸಬೇಕೆಂದು ಮಂಜುನಾಥ್ ಕುಮಾರ್ ಒತ್ತಾಯಿಸಿದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಮತ್ತು ಸ್ಥಳೀಯ ಸಂಸ್ಥೆಗಳಲ್ಲೂ ಜಯಬೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಸಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಡಿಸಿಸಿ ಪ್ರಮುಖರಾದ ಕೆ.ಆರ್.ಚಂದ್ರ ಹಾಗೂ ಸಿ.ಎಲ್.ಗೀತಾ ಉಪಸ್ಥಿತರಿದ್ದರು.