ಶಾಲಾ ಶುಲ್ಕವನ್ನು ಪಾವತಿಸಲು ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಮನವಿ

31/05/2020

ಮಡಿಕೇರಿ ಮೇ 31 : ಕೊರೋನಾ ಲಾಕ್‍ಡೌನಿಂದಾಗಿ ಎಲ್ಲಾ ಶಾಲೆಗಳನ್ನು ಪರೀಕ್ಷೆಗೆ ಮೊದಲು ಮುಚ್ಚಿದ್ದರಿಂದ 2019-20ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಮಕ್ಕಳ ಶಾಲಾ ಶುಲ್ಕವನ್ನು ಪೋಷಕರು ಪಾವತಿಸಿರುವುದಿಲ್ಲ. ಆದ್ದರಿಂದ ಶುಲ್ಕ ಪಾವತಿ ಮಾಡಬೇಕೆಂದು ಕೊಡಗು ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊಡಗು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ಅವರು, ಲಾಕ್ ಡೌನ್‍ನಿಂದಾಗಿ ಪರೀಕ್ಷೆಗೆ ಮೊದಲು ಶಾಲೆಗಳನ್ನು ಮುಚ್ಚಲಾಗಿದ್ದರಿಂದ 2019-20ನೇ ಸಾಲಿನ ಎರಡನೇ ಕಂತಿನ ಶುಲ್ಕವನ್ನು ಶಾಲೆಗೆ ಪಾವತಿಸಲು ಪೋಷಕರಿಂದ ಸಾಧ್ಯವಾಗಿರಲಿಲ್ಲ. ಅಲ್ಲದೇ ಸರ್ಕಾರದಿಂದ ಆರ್.ಟಿ.ಈ ಮಕ್ಕಳ ಶುಲ್ಕ ಮರುಪಾವತಿ ಆಗದಿರುವುದರಿಂದ ಖಾಸಗಿ ಶಾಲೆಯ ಶಿಕ್ಷಕರಿಗೆ ಹಾಗೂ ಇತರ ಸಿಬ್ಬಂದಿಗಳಿಗೆ ವೇತನವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ 2019-20ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಮಕ್ಕಳ ಶಾಲಾ ಶುಲ್ಕವನ್ನು ಪೋಷಕರು ಪಾವತಿಸುವಂತೆ ಮನವಿ ಮಾಡಿದ್ದಾರೆ.
ಕೊಡಗು ಅನುದಾನ ರಹಿತ ಶಾಲೆಗಳು 2018 ಹಾಗೂ 2019ರ ಮಳೆಗಾಲದಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲೂ ಶಾಲೆಗಳು ಎಲ್ಲಾ ರೀತಿ ಸಹಕಾರ ಸೌಲಭ್ಯ ನೀಡಿದ್ದು, ಹಲವಾರು ಖಾಸಗಿ ಶಾಲೆಗಳು ನಿರಾಶ್ರಿತರಿಗೆ ಉಚಿತ ಶಿಕ್ಷಣ, ಶುಲ್ಕದಲ್ಲಿ ವಿನಾಯಿತಿ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದೆ.
ಅದೇ ರೀತಿ ಕೊರೋನಾ ಪರಿಸ್ಥಿತಿಯಲ್ಲು ಕೊಡಗು ಅನುದಾನ ರಹಿತ ಶಾಲೆಗಳು ವಿದ್ಯಾರ್ಥಿ ಹಾಗೂ ಪೋಷಕರ ನೆರವಿಗೆ ಬರಲಿದೆ. ಸರ್ಕಾರದ ಆದೇಶದಂತೆ 2020-21ನೇ ಸಾಲಿನ ಶಾಲೆಯ ಶುಲ್ಕವನ್ನು ಹೆಚ್ಚಿಸುವುದಿಲ್ಲ. ಪೋಷಕರಿಗೆ ಅನುಕೂಲವಾಗುವಂತೆ ಶುಲ್ಕವನ್ನು ಕಟ್ಟಲು ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಅತೀ ಸಂಕಷ್ಟದಲ್ಲಿರುವ ಪೋಷಕರ ಮಕ್ಕಳನ್ನು ಗುರುತಿಸಿ ಆಯಾ ಶಾಲೆಯ ನಿಯಮ ಹಾಗೂ ಕಾಯಿದೆ ಪ್ರಕಾರ ವಿನಾಯಿತಿ ಹಾಗೂ ಕಂತು ಕೊಡಲಾಗುವುದು. ಲಾಕ್ ಡೌನ್ ವೇಳೆಯಲ್ಲಿ ಶಾಲೆಯ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವಿತಿಸಲು ಹಾಗೂ ಇನ್ನಿತರ ಮಾಹಿತಿಯನ್ನು ಆಯಾ ಶಾಲೆಯ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಶಾಲೆಯನ್ನು ಆರಂಭಗೊಳಿಸಲು ಸರ್ಕಾರದ ಸೂಚನೆ ಹಾಗೂ ಕೊವೀಡ್-19 ನಿಯವನ್ನು ಪಾಲಿಸಲಾಗುವುದು ಮತ್ತು ಮಕ್ಕಳ ಸುರಕ್ಷತೆ ಕಾಪಾಡಲು ಬದ್ಧರಿರುವುದಾಗಿ ತಿಮ್ಮಯ್ಯ ತಿಳಿಸಿದ್ದಾರೆ.