ಕಾರ್ಮಿಕರ ಕೊರತೆ : ಕೈಗಾರಿಕೆಗೆ ಸಂಕಷ್ಟ

01/06/2020

ಬೆಂಗಳೂರು ಮೇ 31 : ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ವ್ಯಕ್ತವಾಗಿದೆ.
ಹೊರ ರಾಜ್ಯಗಳ ಕಾರ್ಮಿಕರು ವಲಸೆ ಹೋಗಿದ್ದಾರೆ. ನುರಿತ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದು, ಪರಿಣಾಮ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲದ ತೀವ್ರ ಸಮಸ್ಯೆ ಎದುರಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಪರ್ಯಾಯವಿಲ್ಲ. ಬೃಹತ್ ಕೈಗಾರಿಕೆಗಳಲ್ಲಿ ರೊಬೋಟಿಕ್, ಆಟೋಮೇಷನ್ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೈಗಾರಿಕೆಗಳನ್ನು ಮುನ್ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಸೌಲಭ್ಯ ಸಣ್ಣ ಮಟ್ಟದ ಉದ್ಯಮಗಳಲ್ಲಿಲ್ಲ.
ದೇಶಾದ್ಯಂತ ಸುಮಾರು ನಾಲ್ಕು ಸಾವಿರ ಶ್ರಮಿಕ್ ರೈಲುಗಳ ಮೂಲಕ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸಿದ್ದು, ಬಹುತೇಕ ಮಂದಿ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ.