ಅರ್ಹರಲ್ಲದವರಿಗೂ ಮನೆ ಭಾಗ್ಯ : ತನಿಖೆಗೆ ಮಹಿಳಾ ಜೆಡಿಎಸ್ ಆಗ್ರಹ

11/06/2020

ಮಡಿಕೇರಿ ಜೂ.10 : ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಮನೆಗಳನ್ನು ವಿತರಿಸುವ ಸಂದರ್ಭ ಅರ್ಹರಲ್ಲದ ನಗರದ ಕೆಲವು ಮಂದಿ ಮನೆಗಳನ್ನು ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಜಾತ್ಯಾತೀತ ಜನತಾದಳದ ಮಹಿಳಾ ಘಟಕ, ಈ ಕುರಿತು ಜಿಲ್ಲಾಡಳಿತ ಸೂಕ್ತ ತನಿಖೆಯೊಂದಿಗೆ ಪುನರ್ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೀಲಾ ಶೇಷಮ್ಮ ಮಾತನಾಡಿ, ನಗರ ವ್ಯಾಪ್ತಿಯ ಚಾಮುಂಡೇಶ್ವರಿ ನಗರ, ಇಂದಿರಾ ನಗರ ಬಡಾವಣೆಯ ಹಲವು ಕುಟುಂಬಗಳು ಕಳೆದ ಎರಡು ವರ್ಷಗಳ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಸಾಕಷ್ಟು ಮಂದಿಗೆ ಇತ್ತೀಚೆಗೆ ಜಂಬೂರು ವಿಭಾಗದಲ್ಲಿ ಮನೆಗಳನ್ನು ಒದಗಿಸಲಾಗಿದೆಯೆಂದು ತಿಳಿಸಿದರು.
ಮನೆಗಳನ್ನು ಪಡೆದುಕೊಂಡ ಅರ್ಹ ಫಲಾನುಭವಿಗಳ ನಡುವೆ ಸುಸ್ಥಿತಿಯಲ್ಲಿರುವ ಸ್ವಂತ ಮನೆಗಳನ್ನು ಹೊಂದಿರುವವರು ಕೂಡ ಸುಳ್ಳು ದಾಖಲೆಗಳನ್ನು ನೀಡಿ ಮನೆಗಳನ್ನು ಪಡೆದಿರುವುದು ಕಂಡು ಬಂದಿದೆ. ಅಧಿಕಾರಿಗಳು ಯಾವ ಮಾನದಂಡದಡಿ ಇವರನ್ನು ಫಲಾನುಭವಿಗಳೆಂದು ಗುರುತಿಸಿದ್ದಾರೆ ಎನ್ನುವುದೇ ಸಂಶಯಕ್ಕೆ ಎಡೆಮಾಡಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಮನೆ ಪಡೆದುಕೊಂಡ ಸಂತ್ರಸ್ತರ ಮರು ಸಮೀಕ್ಷೆ ನಡೆಸಿ ನೈಜ ಫಲಾನುಭವಿಗಳಿಗೆ ಮಾತ್ರ ಸರಕಾರದ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕೆಂದು ಲೀಲಾಶೇಷಮ್ಮ ಆಗ್ರಹಿಸಿದರು.
::: ರಸ್ತೆ ಅವ್ಯವಸ್ಥೆ :::
ಮಡಿಕೇರಿ ನಗರದ ಬಹುತೇಕ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಮುಂಗಾರು ಆರಂಭವಾಗಿದ್ದರು ನಗರಸಭೆÉ ಗುಂಡಿ ಮುಚ್ಚುವ ಕೆಲಸವನ್ನು ಮಾಡಿಲ್ಲ. ಜೊತೆಗೆ ಚರಂಡಿ, ರಸ್ತೆ ಬದಿಯ ಕುರುಚಲು ಕಾಡುಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಇದರಿಂದಾಗಿ ವಾಹನಗಳು ಮಾತ್ರವಲ್ಲದೆ ಪಾದಚಾರಿಗಳು ಕೂಡ ರಸ್ತೆಯಲ್ಲಿ ನಡೆದಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧವಾಗಿ ಹಲವು ಬಾರಿ ನಗರಸಭೆಗೆ ಮನವಿಗಳನ್ನು ನೀಡಿ ಪ್ರತಿಭಟನೆಗಳನ್ನು ನಡೆಸಿದರು, ಪೌರಾಯುಕ್ತರು ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಆದಷ್ಟು ಶೀಘ್ರ ಕೈಗೊಳ್ಳಬೇಕೆಂದು ಲೇಲಾಶೇಷಮ್ಮ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದಾ, ಪ್ರಧಾನ ಕಾರ್ಯದರ್ಶಿ ಜೆಸಿಂತಾ ಶ್ರೀಧÀರ್, ಪದಾಧಿಕಾರಿ ಎನ್.ಸಿ.ಮಮತ ಹಾಗೂ ವೀರಾಜಪೇಟೆ ತಾಲ್ಲೂಕು ಅಧ್ಯಕ್ಷೆ ಎಂ.ಎ.ಯಮುನಾ ಉಪಸ್ಥಿತರಿದ್ದರು.