ಸೇನಾ ಗೌರವದೊಂದಿಗೆ ಲೆ.ಜ.ಸೋಮಣ್ಣ ಅಂತ್ಯ ಸಂಸ್ಕಾರ

14/06/2020

ಮಡಿಕೇರಿ ಜೂ.14 : ಕೊಡಗಿನ ಲೆಫ್ಟಿನೆಂಟ್ ಜನರಲ್ ಕೋದಂಡ ಎನ್. ಸೋಮಣ್ಣ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ನಗರದ ಅವರ ಸ್ವಗೃಹದಲ್ಲಿ ಭಾನುವಾರ ನಡೆಯಿತು.
ನಗರದ ಪಂಜರ್‍ಪೇಟೆಯ ಲಕ್ಷ್ಮಿ ನಿವಾಸದಲ್ಲಿ ಶನಿವಾರ ಸಂಜೆ ಲೆ.ಜ. ಸಿ.ಎನ್.ಸೋಮಣ್ಣ ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಕೊನೆಯುಸಿರೆಳೆದಿದ್ದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಭಾರತೀಯ ಸೇನೆಯ ಕಮಾಂಡರ್ ಅರುಣ್ ಗುಪ್ತಾ ಮತ್ತು ಇತರ ಅಧಿಕಾರಿಗಳ ತಂಡ, ಲೆ.ಜ. ಸೋಮಣ್ಣ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ಕಂದಾಯ ಇಲಾಖಾ ಅಧಿಕಾರಿಗಳು, ಪೊಲೀಸ್ ಇಲಾಖಾ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಇದೇ ಸಂದರ್ಭ ಕೊಡಗು ಸೇವಾ ಕೇಂದ್ರ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ, ಕಾವೇರಿ ಸೇನೆ, ಕೊಡಗು ಮಾಜೀ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಿರಿಯ ಸೇನಾಧಿಕಾರಿಯ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದರು.
ಭಾರತಿಯ ಸೇನೆಯ ಉಪ ಮುಖ್ಯಸ್ಥರಾಗಿ ಉನ್ನತ ಹುದ್ದೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದ ಲೆ.ಜ. ಸಿ.ಎನ್. ಸೋಮಣ್ಣ ಅವರು ತಮ್ಮ ಸೇವಾವಧಿಯಲ್ಲಿ ಸೇನೆಯ ಹಲವು ಕಮಾಂಡ್‍ಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
1984-85ರಲ್ಲಿ ಭೂಸೇನೆಯ ಉಪ ಮುಖ್ಯಸ್ಥರಾಗಿದ್ದ ಲೆ.ಜ. ಕೋದಂಡ ಸೋಮಯ್ಯ, ಪಂಜಾಬ್ ರಾಜ್ಯದ ಅಮೃತ್‍ಸರದ ಗೋಲ್ಡನ್ ಟೆಂಪಲ್‍ನಲ್ಲಿ ಅಡಗಿ ಕುಳಿತಿದ್ದ ಉಗ್ರರ ವಿರುದ್ಧದ ಬ್ಲೂಸ್ಟಾರ್ ಆಪರೇಷನ್‍ನ್ನು ಯಶಸ್ವಿಯಾಗಿ ನಿರ್ವಹಿಸಿ, ಉಗ್ರರ ಹುಟ್ಟಡಗಿಸಿದ್ದನ್ನು ಮರೆಯುವಂತಿಲ್ಲ,
ವೀರ ಸೇನಾನಿ ಲೆ.ಜ.ಕೋದಂಡ ಸೋಮಯ್ಯ ಅವರ ಅಂತ್ಯ ಸಂಸ್ಕಾರ ಕೊಡವ ಸಂಪ್ರದಾಯದಂತೆ ನೆರವೇರಿತು. ಕೋದಂಡ ಸೋಮಯ್ಯ ಅವರ ಪುತ್ರಿ ಮುಕ್ಕಾಟಿರ ಶರಣ್ ಪೆಮ್ಮಯ್ಯ ಅವರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಈ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕಂಡ್ರತಂಡ ಸುಬ್ಬಯ್ಯ, ಸಂಚಾಲಕರಾದ ನಿವೃತ್ತ ಮೇಜರ್ ನಂಜಪ್ಪ, ಕಾವೇರಿ ಸೇನೆಯ ರವಿ ಚಂಗಪ್ಪ, ಕೊಡಗು ಸೇವಾ ಕೇಂದ್ರದ ತಮ್ಮು ಪೂವಯ್ಯ, ಮಾಜೀ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿಮಾಡ ನಂಜಪ್ಪ ಸೇರಿದಂತೆ ಕುಟುಂಬ ವರ್ಗ ಸದಸ್ಯರು ಹಾಜರಿದ್ದರು.