ಶಿಕ್ಷಣ ಸಚಿವರ ವಿರುದ್ಧವೇ ದೂರು

19/06/2020

ಬೆಂಗಳೂರು ಜೂ.19 : ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ವ್ಯಕ್ತಿಯೋರ್ವರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್‍ಅವರಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಸಚಿವರು ವಿರುದ್ಧ ಆರ್. ಐಯ್ಯರ್ ಎಂಬುವವರು ದೂರು ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ತನ್ನ ಜಾಲ ವಿಶಾಲವಾಗಿ ಪಸರಿಸಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಚಿವ ಸುರೇಶ್ ಕುಮಾರ್ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲುನಿರ್ಧರಿಸಿದ್ದಾರೆ. ಇದರಿಂದ ವಿದ್ಯಾರ್ಥಿ ಪೋಷಕರು ಸೇರಿ ಶಿಕ್ಷಕರ ಕುಟುಂಬಗಳಿಗೆ ಕಷ್ಟವಾಗಲಿದ್ದು, ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ. ಹೀಗಿದ್ದರೂ ಸಚಿವರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆದರ್ಶ ಆರ್. ಐಯ್ಯರ್ ಮನವಿ ಮಾಡಿದ್ದಾರೆ.