ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರಿಗೆ ಜಿಲ್ಲಾಡಳಿತದಿಂದ ಭಾವನಾತ್ಮಕ ಬೀಳ್ಕೊಡುಗೆ

29/06/2020

ಮಡಿಕೇರಿ ಜೂ.29 : ಜಿಲ್ಲಾಡಳಿತದೊಂದಿಗೆ 2 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದು ಖುಶಿ ತಂದಿದೆ. ಜಿಲ್ಲೆಯ ಜನತೆ ಮತ್ತು ಅಧಿಕಾರಿಗಳ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ನಿರ್ಗಮಿತ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಸಂತಸ ವ್ಯಕ್ತಪಡಿಸಿದರು.       

ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಮತ್ತು ಪೊಲೀಸ್ ಇಲಾಖೆ ವತಿಯಿಂದ ನಿರ್ಗಮಿತ ಎಸ್.ಪಿ ಡಾ.ಸುಮನ್ ಡಿ.ಪನ್ನೇಕರ್ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಎಸ್.ಪಿ ಯಾಗಿ ಅಧಿಕಾರ ವಹಿಸಿಕೊಂಡ ಕ್ಷಮಾ ಮಿಶ್ರ ಅವರ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿ ಸಾಕಷ್ಟು ಅಧಿಕಾರಿಗಳೊಂದಿಗೆ ಮತ್ತು ಇಲಾಖೆಯೊಂದಿಗೆ ಉತ್ತಮ ಭಾಂದವ್ಯವಿತ್ತು. ಐಟಿಡಿಪಿ, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳೊಂದಿಗೆ ಸಾಕಷ್ಟು ಒಡನಾಟವಿತ್ತು. ಪೊಲೀಸ್ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಸಾಕಷ್ಟು ಸಮನ್ವಯತೆಯಿಂದ  ಜಿಲ್ಲೆಯಲ್ಲಿ‌ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ‌ ಇಂತಹ ವಾತಾವರಣ ಸಿಗುವುದು  ತೀರ ಅಪರೂಪ ಎಂದು ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಅವರು ತಿಳಿಸಿದರು.      ಜಿಲ್ಲೆಯಲ್ಲಿ ಪ್ರಕೃತಿ ವಿಕೋಪವನ್ನು ಒಂದು ಇಲಾಖೆ ನಿರ್ವಹಿಸುವುದಿಲ್ಲ. ಎಲ್ಲಾ ಇಲಾಖೆಗಳೂ ಒಟ್ಟಾಗಿ ಸೇರಿ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು ಜಿಲ್ಲಾಧಿಕಾರಿಗಳು ಅಧಿಕಾರಿ ಮಾತ್ರವಲ್ಲ. ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದೆವು ಎಂದು ಅವರು ತಿಳಿಸಿದರು.  ಜಿಲ್ಲೆಯಿಂದ  ಹೋಗಲು ಹೃದಯ ಭಾರವಾಗಿದೆ. ನೂತನ ಎಸ್.ಪಿ ಯವರಿಗೂ ಕೂಡ ಜನತೆ ಮತ್ತು ಅಧಿಕಾರಿ ವರ್ಗ ಸಹಕಾರವನ್ನು ನೀಡಬೇಕು ಎಂದು ಅವರು ಹೇಳಿದರು.     ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ‌ಜಾಯ್ ಅವರು  ಮಾತನಾಡಿ,  ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದು ಸಂತಸದ ವಿಷಯ. ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳಿಗೂ ಪೊಲೀಸ್ ಇಲಾಖೆಯೊಂದಿಗೆ ಸಾಕಷ್ಟು ಸಮನ್ವಯತೆ ಇತ್ತು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.      ಜಿಲ್ಲೆಯಲ್ಲಿ ಎದುರಾದ ಸಾಕಷ್ಟು ಸನ್ನಿವೇಶಗಳಲ್ಲಿ ಬಹಳಷ್ಟು ಧೈರ್ಯದಿಂದ ಸುಮನ್ ಅವರು ಕೆಲಸ ನಿರ್ವಹಿಸಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಹಲವಾರು  ಉತ್ತಮ ಕಾರ್ಯಗಳನ್ನು ಸುಮನ್ ಡಿ.ಪಿ ಅವರು ನಿರ್ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಯವರು ಸಂತಸ ವ್ಯಕ್ತಪಡಿಸಿದರು.       ನನ್ನ ಮತ್ತು ಸುಮನ್ ಅವರ ನಡುವೆ ಉತ್ತಮ ಭಾಂಧವ್ಯ ಇದೆ.  ಒಬ್ಬ ಎಸ್.ಪಿ ಅವರಿಗಿಂತ ಒಬ್ಬ ವ್ಯಕ್ತಿಯಾಗಿ ಮತ್ತು ಸ್ನೇಹಿತೆಯಾಗಿ ಸುಮನ್ ಅವರು ಜೊತೆಗಿದ್ದರು. ಇದೀಗ ವರ್ಗಾವಣೆಯ ನಂತರ ಅವರೊಂದಿಗಿನ ಒಡನಾಟವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದರು. ಜೊತೆಗೆ ಲಾಕ್ ಡೌನ್ ಸಮಯದಲ್ಲಿ ಹಲವು ಕಷ್ಟಕರ ಸಂಧರ್ಭಗಳನ್ನು ಎದುರಿಸಿ ಕಠಿಣ ನಿರ್ಧಾರ ತೆಗೆದುಕೊಂಡು ಜಿಲ್ಲೆಯ ಜನತೆ, ಜನಪ್ರತಿನಿಧಿಗಳಿಂದ  ಪ್ರಶಂಸೆ ಪಡೆದುಕೊಂಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.       ಜೊತೆಹೆ ನೂತನ ಎಸ್ ಪಿ ಕ್ಷಮ ಅವರಿಗೆ ಜಿಲ್ಲೆಗೆ  ಸ್ವಾಗತವನ್ನು ಕೋರಿದರು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ನೂತನ ಎಸ್.ಪಿ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.      ನೂತನ ಎಸ್.ಪಿ ಕ್ಷಮಾ ಮಿಶ್ರ ಅವರು ಮಾತನಾಡಿ, ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ಕಾರ್ಯವನ್ನು ಮುಂದುವರೆಸಲು ಎಲ್ಲರ ಸಹಕಾರ ಬಯಸುತ್ತೇನೆ. ಮತ್ತು ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿಯವರ ಜನಸ್ನೇಹಿ ಕಾರ್ಯವನ್ನು ಮುಂದುವರೆಸಲು ಬಯಸುತ್ತೇನೆ. ಡಿ.ಪಿ ಸುಮನ್ ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.      ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹ ಅವರು ಮಾತನಾಡಿ,  ಮಹಿಳಾ ಅಧಿಕಾರಿಗಳಿಗೆ ನಿಕಟಪೂರ್ವ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ ಅವರು ಮಾದರಿಯಾಗಿದ್ದವರು. ಸುಮನ್ ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು.   ಉಪವಿಭಾಗಾಧಿಕಾರಿ ಟಿ. ಜವರೇಗೌಡ ಅವರು, ಡಾ.ಸುಮನ್ ಡಿ.ಪನ್ನೇಕರ್ ಅವರು  ಸಜ್ಜನ, ಸಹೃದಯಿ ಮತ್ತು ಸರಳ ವ್ಯಕ್ತಿತ್ವವನ್ನು ಹೊಂದಿದ ಅಧಿಕಾರಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಿ.ಪಿ ಸುಮನ್  ಅವರಿಗಿಂತ ಅವರ ಕೆಲಸಗಳು ಮಾತನಾಡಿದೆ. ಕುಟ್ಟು ಭಾಗದ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಿದ ಸಂದರ್ಭದಲ್ಲಿ ಸಾಕಷ್ಟು ವಿರೋಧದ ನಡುವೆಯೂ ರಸ್ತೆ ಬಂದ್ ಮಾಡಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.      ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಅವರು ಮಾತೃ ಹೃದಯದೊಂದಿಗೆ ಜನರ ಕಷ್ಟಗಳಿಗೆ ಸ್ಪಂದಿಸಿ ಸಾರ್ವಜನಿಕರೊಂದಿಗೆ ಬೆರೆಯುವ ಗುಣವನ್ನು ಅಳವಡಿಸಿಕೊಂಡಿದ್ದರು.        ಕೋವಿಡ್-೧೯ ರ ತುರ್ತು ಸಂದರ್ಭ ಭದ್ರತೆ ವಿಚಾರವಾಗಿ ಸಾಕಷ್ಟು ಶ್ರಮ ವಹಿಸಿದ್ದರು. ಕಚೇರಿಗೆ ಬರುವವರ ಕಷ್ಟವನ್ನು ಆಲಿಸುವ ಗುಣ ಅವರಿಗಿದೆ. ಸಾರ್ವಜನಿಕರ ನಡುವೆ ಇದ್ದು ವಿಶಿಷ್ಟ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.         ಡಿವೈ ಎಸ್ಪಿ ದಿನೇಶ್ ಅವರು, ಪೊಲೀಸರು ಎಂದರೆ ಭಾವನೆಗಳೆ ಇರುವುದಿಲ್ಲ ಎಂಬ ಮಾತಿದೆ. ಆದರೆ ಡಾ. ಸುಮನ್ ಡಿ.ಪನ್ನೇಕರ್ ಅವರು ಈ ಮಾತಿಗೆ ವಿರುದ್ಧ. ಅತ್ಯಂತ ಸರಳ ವ್ಯಕ್ತಿ ಎಂದರು. ಕೊಡಗಿನ ಜನತೆ ದಕ್ಷ ಅಧಿಕಾರಿಗೆ ಪ್ರೀತಿ ಪೂರ್ವಕ ವಿದಾಯ ಹೇಳುತ್ತಿದ್ದಾರೆ. ೨ ವರ್ಷಗಳ ಕಾಲ ಕೊಡಗಿನ ಜನತೆಗೆ ಸೇವೆ ಸಲ್ಲಿಸಿದ್ದಾರೆ. ಕೊಡಗಿನ ಮಗಳು ಎಂಬ ಭಾವನೆ ಜನರಲ್ಲಿದೆ ಎಂದು ಅವರು ತಿಳಿಸಿದರು. ಡಾ. ಸುಮನ್ ಅವರು ಉತ್ತಮ ಅಧಿಕಾರಿ ಮಾತ್ರವಲ್ಲ ಫ್ರೊಫೆಷನಲ್ ಅಧಿಕಾರಿ ಎಂದು ತಿಳಿಸಿದರು. ಅತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದವರು. ಸಿಬ್ಬಂದಿಗಳು ಮತ್ತು ಇತರ ಅಧಿಕಾರಿಗಳ ಬಗ್ಗೆ ಸಾಕಷ್ಟು ಆತ್ಮೀಯತೆಯನ್ನು ಹೊಂದಿದ್ದರು‌. ಪೊಲೀಸ್ ಇಲಾಖೆ ಜನಸ್ನೇಹಿಯಾಗಿರಬೇಕು ಎಂಬ ಆಶಾಭಾವನೆ ಹೊಂದಿದ್ದವರು ಎಂದು ಅವರು ತಿಳಿಸಿದರು.    ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್ ಮಾತನಾಡಿ,  ೨ ವರ್ಷಗಳ ಕಾಲ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ.ಡಿ.ಪಿ ಸುಮನ್ ಅವರದು ಬಹುಮುಖ ಪ್ರತಿಭೆ. ವೈದ್ಯಕೀಯ ಶಾಸ್ತ್ರದ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ. ಕೆಲಸದಲ್ಲಿ ಸಾಕಷ್ಟು ಬದ್ಧತೆಯನ್ನು ಅವರು ಹೊಂದಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸರ್ವ ರೀತಿಯಲ್ಲೂ ಪ್ರಕೃತಿ ವಿಕೋಪ ಮುಂತಾದವುಗಳನ್ನು ಎದುರಿಸಲು ಸಜ್ಜಾಗುವಂತೆ ತರಬೇತಿಯನ್ನು ನೀಡಿದ್ದಾರೆ.        ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿಗಳ ಕರ್ತವ್ಯದ ಮಾದರಿಯನ್ನು  ನಾವು ಅಳವಡಿಸಿಕೊಂಡಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ಹೇಳಿದರು.       ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಅವರು ಮಾತಮಾಡಿ,  ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ೨೦೧೮ ರಲ್ಲಿ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ ಸಂಧರ್ಭ ಸಾಕಷ್ಟು ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಅಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಜನರಿಗೋಸ್ಕರ ಪ್ರಾಮಾಣಿಕವಾಗಿ ಸಾಕಷ್ಟು ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಅವರು ತಿಳಿಸಿದರು.        ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮ ಸೇನ ಅವರು ಮಾತನಾಡಿ, ಪ್ರತಿ ಸರ್ಕಾರಿ ನೌಕರರೂ ಸಹ ಅಪರಿಚಿತರಾಗಿ ಬಂದು ಆತ್ಮೀಯರಾಗಿ ಸೇರಿ ನೆನಪನ್ನು ಮಾತ್ರ ಜೊತೆಗೆ ಕೊಂಡೊಯ್ಯುತ್ತಾರೆ. ಅಂತೆಯೇ ನಿರ್ಗಮಿತ ಎಸ್.ಪಿ ಅವರೂ ಸಹ  ಕೊಡಗಿನ ಮಗಳು ಎಂಬ ಮಾತನ್ನು ಜಿಲ್ಲೆಯ ಜನತೆ ಹೇಳುತ್ತಾರೆ. ಅಲ್ಲದೆ ಜನ ಸಾಮಾನ್ಯರಿಗೆ ಅತ್ಯಂತ ಪ್ರೀತಿ ಪಾತ್ರರಾದವರು. ಪ್ರಕೃತಿ ವಿಕೋಪ ಸಂದರ್ಭ ತಮ್ಮನ್ನು ತಾವು ತೊಡಗಿಸಿಕೊಂಡು ಸಹೋದ್ಯೋಗಿಗಳನ್ನೂ ಪ್ರೇರೇಪಿಸಿ ಮುನ್ನುಗ್ಗುವ ಸ್ವಭಾವವನ್ನು ಸುಮನ್ ಡಿ ಪನ್ನೇಕರ್ ಅವರಿಂದ ಕಲಿಯಬೇಕಿದೆ ಎಂದು ಅವರು ತಿಳಿಸಿದರು. ಎಲ್ಲಾ ಇಲಾಖೆಗಳನ್ನ ಒಗ್ಗೂಡಿಸಿಕೊಂಡು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಕೊರೊನಾ ನಿಯಂತ್ರಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದೆ. ಜನಪ್ರತಿನಿಧಿಗಳಿಂದ ಪ್ರಶಂಸೆ ಪಡೆದಂತಹ ಅಧಿಕಾರಿ ಎಂದು ಸುಮನ್ ಡಿ.ಪನ್ನೇಕರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ  ಅರುಂಧತಿ ಅವರು ಮಾತನಡಿ, ೨ ವರ್ಷಗಳ ಕಾಲ ಅತ್ಯಂತ ಕಠಿಣ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಕೊಡಗಿನ ಜನತೆ ಡಾ. ಸುಮನ್ ಡಿ.ಪನ್ನೇಕರ್ ಅವರ ಸೇವೆಯನ್ನು ಮರೆಯುವುದಿಲ್ಲ. ಅತ್ಯಂತ ಸರಳ ವ್ಯಕ್ತಿ. ಹೂವಿನಂತೆ ಕೋಮಲವಾಗಿ ವಜ್ರದಂತೆ ಕಠಿಣವಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್-೧೯ ಸಂದರ್ಭ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ ಕಾರ್ಯಕ್ರಮವನ್ನು ರೂಪಿಸಿದವರು. ಈ ಮೂಲಕ ಸಾಕಷ್ಟು ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡಲು ಸಾಧ್ಯವಾಯಿತು ಎಂದು‌ ಅವರು ತಿಳಿಸಿದರು.      ಡಿಎಚ್ ಒ ಮೋಹನ್ ಮಾತನಾಡಿ, ಸಾಕಷ್ಟು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಲು ಸಹಕಾರಿಯಾಗಿದ್ದರು. ಕೋವಿಡ್ ಪೀಡಿತ ಪಿ.೧೫ ರ ಪ್ರಯಾಣದ ಮಾಹಿತಿಯನ್ನು ಪತ್ತೆ ಹಚ್ಚಲು ಸುಮನ್ ಡಿ.ಪನ್ನೇಕರ್ ಅವರ ಚಾಕಚಕ್ಯತೆ ಬಹು ಮುಖ್ಯವಾಗಿತ್ತು. ಖುದ್ದು ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರೇ ರೋಗಿಯೊಂದಿಗೆ ಫೋನ್ ನಲ್ಲಿ ಮಾತನಾಡಿ ಮಾಹಿತಿ ಕಲೆಹಾಕಿದರು ಎಂದು ಅವರ ಕಾರ್ಯವೈಖರಿಯ ಬಗ್ಗೆ ತಿಳಿಸಿದರು.ಉಪ ನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರು ಮಾತನಾಡಿ  ಜಿಲ್ಲೆಯಲ್ಲಿ ಗಾಂಜಾ ಹಾವಳಿಯನ್ನು ತಡೆಗಟ್ಟುವಲ್ಲಿ ಡಾ.ಸುಮನ್ ಡಿ.ಪನ್ನೇಕರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಡೆಯಲು ಪೊಲೀಸ್ ಇಲಾಖೆಯ ಕೊಡುಗೆ ಅಪಾರ ಎಂದರು‌    ಇದೇ ವೇಳೆ ನಿರ್ಗಮಿತ ಎಸ್.ಪಿ ಡಾ.ಸುಮನ್ ಡಿ.ಪನ್ನೇಕರ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ‌ ಜಾಯ್ ಅವರು ಫಲ ತಾಂಬೂಲಗಳನ್ನು ನೀಡಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.     ನೂತನ ಎಸ್.ಪಿ ಕ್ಷಮಾ ಮಿಶ್ರ ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ‌ಸ್ವಾಗತಿಸಲಾಯಿತು.     ಸಮಾರಂಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಇತರರು ಇದ್ದರು.      ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀ ಅವರು ಸ್ವಾಗತಿಸಿದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ ದರ್ಶನ್ ಅವರು ವಂದಿಸಿದರು.