ಉನ್ನತ ಶಿಕ್ಷಣ ಡಿಜಿಟಲೀಕರಣ

July 1, 2020

ಬೆಂಗಳೂರು ಜು. 1: ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಸಂಪೂರ್ಣ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ಜುಲೈ 15 ರಿಂದ ಎಲ್ಲ ವಿಶ್ವವಿದ್ಯಾಲಯಗಳು ಸರ್ಕಾರದ ಜತೆ ಇ-ಆಫೀಸ್ (ಆನ್ಲೈನ್) ಮೂಲಕವೇ ವ್ಯವಹರಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಆದೇಶಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ, ಎನ್‍ಐಸಿ ಸಹಯೋಗದಲ್ಲಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳ ಆನ್ಲೈನ್ ಸಂಯೋಜನೆ ಪೋರ್ಟಲ್ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇ-ಅಫೀಸ್ ಯಶಸ್ವಿಯಾಗಿದ್ದು, ಅದರ ಮೂಲಕವೇ ಕಡತಗಳು ರವಾನೆ ಆಗಬೇಕು. ಎಲ್ಲಿ ಯಾವ ಕಡತ ಇದೆ? ವಿಲೇವಾರಿ ವಿಳಂಬವಾಗಲು ಕಾರಣ ಏನು ಎನ್ನುವುದನ್ನು ತಿಳಿಯಬಹುದು. ಅನಗತ್ಯವಾಗಿ ಕಡತಗಳನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಇಡಬಹುದು ಎಂದು ಅವರು ಹೇಳಿದರು.
ಯಾವುದೇ ಕಾಲೇಜು ಅಥವಾ ಕೋರ್ಸ್ ಗಳಿಗೆ ಮಾನ್ಯತೆ ನೀಡಬೇಕಾದರೂ ಆದಕ್ಕೆ ಸಂಬಂಧಿಸಿದ ಕಡತ ಅಥವಾ ಪತ್ರ ವ್ಯವಹಾರಗಳು ಆನ್ಲೈನ್ ಮೂಲಕವೇ ಆಗಬೇಕು. ಇದರಿಂದ ವಿಳಂಬ ಆಗುವುದು ತಪ್ಪುವ ಜತೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಕೂಡ ಕಾಣಬಹುದು ಎಂದು ಹೇಳಿದರು .