ವಿ.ಪಿ.ಶಶಿಧರ್ ವಿರುದ್ಧ ಪ್ರಕರಣ : ಜನಪರ ವೇದಿಕೆ ಖಂಡನೆ

03/07/2020

ಮಡಿಕೇರಿ ಜು.3 : ಇತ್ತೀಚೆಗೆ ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಪ್ರತಿಭಟನೆ ಸಂದರ್ಭ ಪಕ್ಷದ ಪ್ರಮುಖರಾದ ವಿ.ಪಿ.ಶಶಿಧರ್ ಅವರು ಆಡಿದ ಮಾತುಗಳನ್ನೇ ದೊಡ್ಡ ತಪ್ಪೆಂದು ಪ್ರತಿಬಿಂಬಿಸಿ ಬಿಜೆಪಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಂಡಿಸುವುದಾಗಿ ಕೊಡಗು ಜನಪರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮೊಹಮ್ಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿ.ಪಿ.ಶಶಿಧರ್ ಒಬ್ಬ ಪ್ರಾಮಾಣಿಕ ಮತ್ತು ಪ್ರಜ್ಞಾವಂತ ರಾಜಕಾರಣಿಯಾಗಿದ್ದು, ಭಾಷೆಯ ಮೇಲೆ ಪ್ರಬುದ್ಧತೆ ಹೊಂದಿದ್ದಾರೆ. ಪ್ರತಿಭಟನೆಯ ಸಂದರ್ಭ ಆಡಿದ ಮಾತುಗಳನ್ನು ತಪ್ಪಾಗಿ ತಿರುಚಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಬಿಜೆಪಿ ತನ್ನ ಆಡಳಿತದ ವೈಫಲ್ಯಗಳನ್ನು ಜನರಿಂದ ಮರೆ ಮಾಚಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯವನ್ನು ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ, ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗುತ್ತಿದೆ. ತೈಲೋತ್ಪನ್ನ ಮತ್ತು ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವನ್ಯಜೀವಿಗಳ ದಾಳಿಯಿಂದ ಬೆಳೆಗಾರರು ಹಾಗೂ ಕಾರ್ಮಿಕ ವರ್ಗ ಕಷ್ಟನಷ್ಟಗಳನ್ನು ಅನುಭವಿಸುತ್ತಿದೆ. ಮಳೆಹಾನಿ ಸಂತ್ರಸ್ತರು ಸೂಕ್ತ ಪರಿಹಾರ ಮತ್ತು ವಸತಿ ದೊರೆಯದೆ ಬೀದಿಗೆ ಬಂದಿದ್ದಾರೆ. ಜಿಲ್ಲೆಯ ಸೀಲ್ ಡೌನ್ ಪ್ರದೇಶಗಳ ನಿವಾಸಿಗಳು ಅಗತ್ಯ ವಸ್ತುಗಳು ಸಿಗದೆ ಪರಿತಪಿಸುತ್ತಿದ್ದಾರೆ. ಇದೆಲ್ಲವನ್ನೂ ನಿಭಾಯಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ವಿಫಲರಾಗಿರುವುದರಿಂದ ಜನರ ಹಾದಿ ತಪ್ಪಿಸುವುದಕ್ಕಾಗಿ ಶಶಿಧರ್ ಅವರ ವಿರುದ್ಧ ಗೂಬೆ ಕೂರಿಸಲಾಗುತ್ತಿದೆ ಎಂದು ಕೆ.ಎಂ.ಮೊಹಮ್ಮದ್ ಆರೋಪಿಸಿದ್ದಾರೆ.
ಈ ರೀತಿಯ ಕುತಂತ್ರ ರಾಜಕಾರಣದ ವಿರುದ್ಧ ಜಿಲ್ಲೆಯ ಜನ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿರುವ ಅವರು ಪೊಲೀಸ್ ಇಲಾಖೆ ಶಶಿಧರ್ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಒಬ್ಬ ಉತ್ತಮ ರಾಜಕಾರಣಿಯ ತೇಜೋವಧೆ ಮುಂದುವರೆದರೆ ಜನಪರ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಹೋರಾಟವನ್ನು ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.