ಮಾಹಿತಿ-ಶಿಕ್ಷಣ-ಸಂವಹನ ಕಾರ್ಯಕ್ರಮ

03/07/2020

ಮಡಿಕೇರಿ ಜು.3 : ಗ್ರಾಮೀಣ ಪ್ರದೇಶದ ಮಹಿಳೆಯರು ಋತುಚಕ್ರದ ದಿನಗಳಲ್ಲಿ ಇಂದಿಗೂ ಹಳೇಯ ಕ್ರಮ ಅನುಸರಿಸುತ್ತಿರುವ ಜೊತೆಗೆ ಋತುಚಕ್ರದ ವೇಳೆಗೆ ಎದುರಾಗುವ ಸಮಸ್ಯೆ ಬಗ್ಗೆ ಮುಕ್ತವಾಗಿ ಮಾತಾನಾಡಲು ಹಾಗೂ ತಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳನ್ನು ಹೇಳಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಅನೇಕ ರೀತಿಯ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅಲ್ಲದೇ ಶಾಲೆಗೆ ಹೋಗುವ ಹೆಣ್ಣು ಮಕ್ಕಳ ಹಾಜರಾತಿಯಲ್ಲಿಯೂ ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ಶೌಚಾಲಯವನ್ನು ಬಳಸುವಾಗ ಋತುಚಕ್ರ ನಿರ್ವಹಣೆ ಪರಿಕರಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಮಹಿಳೆಯರನ್ನು ಹಾಗೂ ಯುವತಿಯರನ್ನು ಮಾನಸಿಕವಾಗಿ ಸಧೃಢರನ್ನಾಗಿಸುವ ಕಾರ್ಯ ನಮ್ಮಿಂದಾಗಬೇಕಾಗಿದೆ. ಪ್ರಕೃತಿಯ ಸಹಜ ಪ್ರಕ್ರಿಯೆಯನ್ನು ಸಹಜವಾಗಿಯೇ ಸ್ವೀಕರಿಸುವಂತೆ ಪ್ರೇರೇಪಿಸಬೇಕಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಸ್ವಚ್ಚ್ ಭಾರತ್ ಮಿಷನ್(ಗ್ರಾ). ಗ್ರಾಮೀಣ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಸ್ವಚ್ಚ ಭಾರತ್ ಮಿಷನ್ ಸ್ವಚ್ಚಗ್ರಹಿಗಳು, ಸಾಮಾಜಿಕ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂಧಿಗಳಿಗೆ ಈ ಕುರಿತು ಮಾಹಿತಿ-ಶಿಕ್ಷಣ-ಸಂವಹನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಋತುಚಕ್ರ ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಬಟ್ಟೆ, ಡೈಪರ್,ಸ್ಯಾನಿಟರಿ ನ್ಯಾಪ್‍ಕೀನ್ ಬಳಸಲಾಗುತ್ತಿದೆ. ಇದರ ನಿರ್ವಹಣೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ವೈಜ್ಞಾನಿಕ ಮಾದರಿಯ ಸಿಲಿಕಾನ್ ಕಪ್ ಬಳಕೆಯಲ್ಲಿರುತ್ತದೆ. ಇದು ವೈಜ್ಞಾನಿಕವಾಗಿದ್ದು, ಆರೋಗ್ಯಕರವಾಗಿದ್ದು, ಕಡಿಮೆ ಖರ್ಚಿನ ಪರಿಕರವಾಗಿರುತ್ತದೆ. ಇದರ ನಿರ್ವಹಣೆ ಕೂಡ ಸರಳವಾಗಿರುತ್ತದೆ. ಈ ಕಪ್‍ನ್ನು ಸುಮಾರು 15 ವರ್ಷಗಳ ತನಕ ಬಳಸಬಹುದಾಗಿದೆ. ಈ ಕಪ್‍ನ್ನು ಬಳಸಲು ಅಂಜಿಕೆ ಇರುವವರು ಬಟ್ಟೆ ಪ್ಯಾಡ್‍ಗಳನ್ನು ಕೂಡ ಬಳಸಬಹುದು. ಆದರೆ ವೈಜ್ಞಾನಿಕ ಕ್ರಮವನ್ನು ಅಳವಡಿಸಬೇಕಾಗಿರುತ್ತದೆ. ಸಾಮಾನ್ಯವಾಗಿ ಬಟ್ಟೆ ಪ್ಯಾಡ್‍ಗಳನ್ನು ಒಂದು ಬಾರಿ ಬಳಸಿದ ನಂತರ ಸೋಪಿನಿಂದ ಸ್ವಚ್ಚಗೊಳಿಸಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು.
ಇಂತಹ ಪ್ಯಾಡ್‍ಗಳನ್ನು ಕನಿಷ್ಟ ಮೂರು ಜೊತೆ ಇಟ್ಟುಕೊಂಡಿರಬೇಕು. ಈ ವಿಷಯದ ಕುರಿತು ಕುಟುಂಬದ ಎಲ್ಲಾ ಸದಸ್ಯರಿಗೂ ಮಾಹಿತಿಯನ್ನು ಸಾಮಾಜಿಕ ಕಾರ್ಯಕರ್ತೆಯರು ನೀಡಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರೊಂದಿಗೆ ಮಾಹಿತಿ ಪಡೆದುಕೊಳ್ಳಬಹುದೆಂದು ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಚ ಭಾರತ್ ಮೀಷನ್(ಗ್ರಾ) ಇದರ ಜಿಲ್ಲಾ ಸಮಾಲೋಚಕರು ಆದ ಡಿ.ಡಿ.ಪೆಮಯ್ಯ ಹಾಗೂ ಜಿಲ್ಲಾ ಸಮಾಲೋಚಕರು ಆದ ಹರ್ಷಿತಾ ಎ.ಆರ್. ಇವರು ಕೊಡಗು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು.