ಕೊಡವ ಬುಡಕಟ್ಟನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ

03/07/2020

ಮಡಿಕೇರಿ ಜು. 3 : ಕೊಡವ ಬುಡಕಟ್ಟು ಕುಲಕ್ಕೆ ಎಸ್.ಟಿ ಪಟ್ಟಿಯಲ್ಲಿ ಮಾನ್ಯತೆ ದೊರಕಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ಸಿಎನ್‍ಸಿ ಪ್ರಮುಖರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು ನಾಚಪ್ಪ ಮಾತನಾಡಿ, ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್‍ರವರನ್ನು ಹೊಗಳಿ ಹೊನ್ನಶೂಲಕ್ಕೇರಿಸಿ ದಲಿತರಿಗೆ ಪಂಗನಾಮ ಹಾಕಿದ ಪರಿಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರವರನ್ನು ಹೊಗಳುವ ಮೂಲಕ ಕೊಡವರನ್ನು ವಂಚಿಸುವ ನಯ ವಂಚಕತನದ ಪರಮಾವಧಿಯಾಗಿ ಇಂದಿನ ರಾಜಕೀಯ ಹೇಳಿಕೆಗಳು-ಬೆಳವಣಿಗೆಗಳು ಕಾಣುತ್ತಿವೆ ಎಂದು ಆರೋಪಿಸಿದರು.
ಕೊಡವರನ್ನ ಎಸ್.ಟಿ ಪಟ್ಟಿಗೆ ಸೇರಿಸುವ ಮೂಲಕ ಅವರ ಅಧಿಕೃತ ದಾಖಲೆಗಳಿಲ್ಲದ ಪೂರ್ವಾಜಿತ ಆಸ್ತಿ, ಚಾರಿತ್ರಿಕ ನಿರಂತರತೆ, ಭಾಷೆ, ಸಂಸ್ಕೃತಿ, ರಾಜಕೀಯ ಸಬಲೀಕರಣ, ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ರಾಜ್ಯಾಂಗ ಖಾತ್ರಿಗೆ ಒಳಪಡಿಸಬೇಕು. ಅದಕ್ಕಾಗಿ ಇದೀಗ ಸಿ.ಎನ್.ಸಿ/ಕೊಡವ ನ್ಯಾಷನಲ್ ಕೌನ್ಸಿಲ್ ಹಕ್ಕೋತ್ತಾಯದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ (ಕೆ.ಎಸ್.ಟಿ.ಆರ್.ಐ) ನಡೆಯುತ್ತಿರುವ ಕೊಡವರ ಕುಲಶಾಸ್ತ್ರ ಅಧ್ಯಯನವು ಲೋಕೂರು ಕಮಿಟಿಯ ಮಾನದಂಡಗಳ ಆಧಾರದಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲದೆ ನಡೆಯಬೇಕು ಇಲ್ಲಾ ಇದರಲ್ಲಿ ಎಡವಿದರೆ ಮರು ಅಧ್ಯಯನ ನಡೆಸಬೇಕು. ಇಲ್ಲ, ನೇರವಾಗಿ ಸ್ವಾತಂತ್ರ್ಯ ಪೂರ್ವದ Emic Approach ನಲ್ಲಿ ರೂಪಿಸಲಾದ ಎಲ್ಲಾ ದಾಖಲೆಗಳ ನಿಖರತೆಯ ಆಧಾರದಲ್ಲಿ ಯಾವುದೇ ಅಧ್ಯಯನವಿಲ್ಲದೇ ಕೊಡವರನ್ನು ಎಸ್‍ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಪತ್ರಿಭಟನೆಯಲ್ಲಿ ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪುಲ್ಲೆರ ಕಾಳಪ್ಪ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಚಂಬಂಡ ಜನತ್, ಬೇಪಡಿಯಂಡ ಬಿದ್ದಪ್ಪ, ಚಂಙಂಡ ಚಾಮಿ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ದಿನೇಶ್, ನಂದಿನೆರವಂಡ ಅಯ್ಯಣ್ಣ, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್ ದೇವಯ್ಯ, ಕೊಂಗೆಟ್ಟಿರ ಲೋಕೇಶ್, ಮಣವಟ್ಟಿರ ನಂದ ಭಾಗವಹಿಸಿದ್ದರು.

ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಜವರೇಗೌಡ ಸ್ವೀಕರಿಸಿದರು.