ಕಾಂಗ್ರೆಸ್ ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಪ್ರಮುಖರಿಂದ ಒತ್ತಾಯ

06/07/2020

ಸೋಮವಾರಪೇಟೆ ಜು. 6 : ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ, ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಕೂಡಲೆ ರಾಜೀನಾಮೆ ನೀಡಬೇಕೆಂದು ಸೋಮವಾರಪೇಟೆಯ ಕಾಂಗ್ರೆಸ್ ಪ್ರಮುಖರು ಒತ್ತಾಯಿಸಿದ್ದಾರೆ.
ಪಕ್ಷದ ಪ್ರಮುಖರ ಆಂತರಿಕ ವಿಷಯವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಬೇಕು. ಆದರೆ ಜಿಲ್ಲಾಧ್ಯಕ್ಷರು ಪಕ್ಷದ ಆಂತರಿಕ ವಿಷಯವನ್ನು ಬಹಿರಂಗಗೊಳಿಸುತ್ತಿರುವುದು, ಪಕ್ಷ ಸಂಘಟನೆಗೆ ಹಿನ್ನೆಡೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆ.ಎ.ಆದಂ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಮಲ ಕಾಂಗ್ರೆಸಿಗನಂತೆ ವರ್ತಿಸುತ್ತಿರುವ ಮಂಜುನಾಥ್ ಕುಮಾರ್ ನೈತಿಕ ರಾಜೀನಾಮೆ ನೀಡದಿದ್ದರೆ “ಮಂಜುನಾಥ್ ಹಠಾವೋ ಕಾಂಗ್ರೆಸ್ ಬಚಾವೋ” ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಕ್ಕಳಿಗೆ ಪಾಠ ಮಾಡಿಕೊಂಡಿದ್ದ ಮಂಜುನಾಥ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಾರದಿತ್ತು. ಸಂಘಟನೆ ಚಾತುರ್ಯವಿಲ್ಲದೆ ಲೋಕಸಭಾ ಚುನಾವಣೆ ಸೇರಿದಂತೆ, ಇತರ ಚುನಾವಣೆಗಳಲ್ಲೂ ಕಾಂಗ್ರೆಸ್‍ಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಈಗ ಅವರ ಹಿಂಬಾಲಕರು ಕಾಂಗ್ರೆಸ್ ಹಿರಿಯ ನಾಯಕರಾದ ಕೆ.ಪಿ.ಚಂದ್ರಕಲಾ ಹಾಗು ವಿ.ಪಿ.ಶಶಿಧರ್ ಅವರುಗಳ ವಿರುದ್ಧ ಬಹಿರಂಗ ಹೇಳಿಕೆಯ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಇವೆಲ್ಲಾ ಕಾರಣಗಳಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನೇ ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.
ಇದುವರೆಗೆ ಇಂತಹ ಕಳಪೆ ಅಧ್ಯಕ್ಷರನ್ನು ಜಿಲ್ಲಾ ಕಾಂಗ್ರೆಸ್ ಕಂಡಿಲ್ಲ. ವಿ.ಪಿ.ಶಶಿಧರ್ ಹಾಗು ಕೆ.ಪಿ.ಚಂದ್ರಕಲಾ ಅವರನ್ನು ತುಳಿದರೆ ಎಂ.ಎಲ್.ಎ. ಆಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಮಂಜುನಾಥ್ ಅಧಿಕಾರವಧಿಯಲ್ಲಿ ದಲಿತರನ್ನು ಕಡೆಗಣಿಸಲಾಗಿದೆ. ಈ ಕಾರಣದಿಂದ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಎಸ್.ಸಿ.ಘಟಕದ ರಾಜ್ಯ ಸಂಚಾಲಕ ಬಿ.ಇ.ಜಯೇಂದ್ರ ಅಗ್ರಹಿಸಿದರು.
ಗೋಷ್ಠಿಯಲ್ಲಿ ಪಕ್ಷದ ಎಸ್.ಸಿ.ಘಟಕದ ಮಾಜಿ ಅಧ್ಯಕ್ಷ ಎಚ್.ಎ.ನಾಗರಾಜ್, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ದಿನೇಶ್ ಇದ್ದರು.