ಅಂಬೇಡ್ಕರ್ ನಿವಾಸದ ಮೇಲೆ ದಾಳಿ

09/07/2020

ಮುಂಬೈ ಜು.9 : ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಈ ಸಂಬಂಧ ದುಷ್ಕರ್ಮಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಮುಂಬೈನ ದಾದರ್ ನಲ್ಲಿರುವ ದಿ.ಡಾ.ಬಿಆರ್ ಅಂಬೇಡ್ಕರ್ ಅವರ ಐತಿಹಾಸಿಕ “ರಾಜ್ ಗೃಹ” ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಗೊಳಿಸಿದ್ದಾರೆ. ಮೂಲಗಳ ಪ್ರಕಾರ ಮಂಗಳವಾರ ಸಂಜೆ ಅಂಬೇಡ್ಕರ್ ಅವರ ರಾಜ್ ಗೃಹ ನಿವಾಸಕ್ಕೆ ಕನಿಷ್ಠ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳನುಗ್ಗಿದ್ದರು. ಅಷ್ಟೇ ಅಲ್ಲ ಸಿಸಿಟಿವಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್, ಹೂ ಕುಂಡಗಳನ್ನು ಒಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜತ್ ಅವರು ಹೇಳಿರುವಂತೆ ಅಂಬೇಡ್ಕರ್ ಕುಟುಂಬಸ್ಥರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಿಡಿಗೇಡಿಗಳು ಎರಡು ಕೊಠಡಿಗಳತ್ತ ಕಲ್ಲು ತೂರಿದ್ದಾರೆ. ಒಂದು ಕೊಠಡಿ ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿ ಹಾಗೂ ಬಾಬಾಸಾಹೇಬ್ ಅವರ ಪುಸ್ತಕಗಳ ಕೊಠಡಿಯಾಗಿದ್ದರೆ ಇನ್ನೊಂದು ಅವರ ಕಚೇರಿ/ಸಭಾ ಕೊಠಡಿಯಾಗಿದೆ ಎಂದು ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಹಾಗೂ ಅಂಬೇಡ್ಕರ್ ಅವರ ಪುತ್ರ ಪ್ರಕಾಶ್ ಅಂಬೇಡ್ಕರ್ ಅವರ ಮಗನಾಗಿರುವ ಸುಜತ್ ತಿಳಿಸಿದ್ದಾರೆ.