ವೈದ್ಯರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

10/07/2020

ಬೆಂಗಳೂರು ಜು.10 : ಗುತ್ತಿಗೆ ಆಯುಷ್ ವೈದ್ಯರು, ವೇತನ ತಾರತಮ್ಯ, ಸೇವಾ ಭದ್ರತೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿದಿದ್ದಾರೆ.
ಈ ಸಂಬಂಧ ಆರೋಗ್ಯ ಸಚಿವರು ಮತ್ತು ಮುಖ್ಯಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿರುವ ಆಯುಷ್ ವೈದ್ಯರು ಜುಲೈ 14ರ ಸಂಜೆಯವರೆಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದಿದ್ದಲ್ಲಿ ಜುಲೈ 15 ರಂದು 2000 ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುವುದಲ್ಲದೆ, ಖಾಸಗಿ ಆಯುಷ್ ವೈದ್ಯರು ಸೇವೆಯನ್ನು ಸ್ಥಗಿತಗೊಳಿ ಸುವುದಾಗಿ ತಿಳಿಸಿದ್ದಾರೆ.
ರಾಜ್ಯದ 2000 ಗುತ್ತಿಗೆ ವೈದ್ಯರು ಹಾಗೂ 27000 ಖಾಸಗಿ ವೈದ್ಯರ ಹೋರಾಟಕ್ಕೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಬೆಂಬಲ ನೀಡಿದೆ.
ಆಯುಷ್ ವೈದ್ಯರಿಗೂ ಇತರೆ ಹೊಮಿಯೋಪತಿಕ್ ವೈದ್ಯರಂತೆ ವೇತನ, ಸೇವಾ ಭದ್ರತೆ ಕಲ್ಪಿಸುವುದಾಗಿ ಮೇ 26 ರಂದು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರು. ಸರ್ಕಾರದ ಭರವಸೆ ಎರಡು ತಿಂಗಳು ಕಳೆದರೂ ಈಡೇರಿಸುವ ಗೋಜಿಗೆ ಸಚಿವರು ಹೋಗಿಲ್ಲ. ಹೀಗಾಗಿ ಅನಿವಾರ್ಯಾವಾಗಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಆಯುಷ್ ವೈದ್ಯರು ಹಾಜರಾಗುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.