ತೆರಿಗೆ ವಿನಾಯಿತಿಗೆ ಮೀನಾ ಮೇಷ : ಚೇಂಬರ್ ಪ್ರಧಾನ ಕಾರ್ಯದರ್ಶಿ ನವೀನ್ ಕುಶಾಲಪ್ಪ ಅಸಮಾಧಾನ

10/07/2020

ಮಡಿಕೇರಿ ಜು.10 : ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ ನೀಡಬೇಕು ಮತ್ತು ನಗರಸಭೆ ಆಸ್ತಿ ತೆರಿಗೆ ವಿನಾಯಿತಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮಾಡಿಕೊಂಡ ಮನವಿಗೆ ಸೂಕ್ತ ಸ್ಪಂದನೆ ದೊರೆತ್ತಿಲ್ಲವೆಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಎರಡು ವರ್ಷಗಳ ಅತಿವೃಷ್ಟಿ ಹಾನಿಯಿಂದ ತುಂಬಲಾರದ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಜನತೆ ಹಾಗೂ ವಾಣಿಜ್ಯೋದ್ಯಮಿಗಳು ಇದೀಗ ಕೊರೋನಾ ಲಾಕ್‍ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಹಿನ್ನಡೆಯ ಹಿನ್ನೆಲೆ ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ ನೀಡಬೇಕು ಮತ್ತು ಮಡಿಕೇರಿ ನಗರಸಭೆಯ ತೆರಿಗೆ ಮೊತ್ತ ಅಧಿಕವಾಗಿರುವುದರಿಂದ ವಿನಾಯಿತಿ ನೀಡುವಂತೆ ಎರಡು ಬಾರಿ ಸಚಿವ ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದ ಸಚಿವರು ಇಂದು ಚೇಂಬರ್ ಆಫ್ ಕಾಮರ್ಸ್ ಪ್ರಮುಖರೊಂದಿಗೆ ಸಭೆ ನಡೆಸಿ ಎರಡೂ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದ್ದಾರೆ.
ನಗರಸಭೆ ತೆರಿಗೆ ವಿನಾಯಿತಿ ಅಸಾಧ್ಯವೆಂದು ತಿಳಿಸಿರುವ ಸಚಿವರು ಆಸ್ತಿ ತೆರಿಗೆ ಪಾವತಿಗೆ ಆಗಸ್ಟ್ 30 ರವರೆಗೆ ಕಾಲಾವಕಾಶ ನೀಡುವುದಾಗಿ ಮೌಖಿಕ ಭರವಸೆಯನ್ನಷ್ಟೇ ನೀಡಿದ್ದಾರೆ. ಆದರೆ ಸರ್ಕಾರದ ಅಧಿಕೃತ ಆದೇಶ ಬಾರದೆ ಜಿಲ್ಲಾಡಳಿತ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಸಚಿವರ ಈ ರೀತಿಯ ಭರವಸೆಯಿಂದ ಜನಸಾಮಾನ್ಯರಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಯಾವುದೇ ರೀತಿಯ ಸಹಕಾರ ದೊರೆತ್ತಂತೆ ಆಗುವುದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ನವೀನ್ ಕುಶಾಲಪ್ಪ, ಸಚಿವರ ಮಾತಿಗೆ ಸಂಸದರು ಕೂಡ ಧ್ವನಿಗೂಡಿಸಿರುವುದು ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಯಾವುದೇ ವ್ಯವಹಾರಗಳಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಾಣಿಜ್ಯೋದ್ಯಮಿಗಳು ಹಾಗೂ ಕಷ್ಟದ ಜೀವನ ಸಾಗಿಸುತ್ತಿರುವ ಜನಸಾಮಾನ್ಯರ ನೆರವಿಗೆ ಬಾರದೆ ಅಡ್ಡಗೋಡೆ ಮೇಲೆ ದೀಪವಿಟ್ಟ ಮಾದರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುತ್ತಿರುವುದು ವಿಷಾದಕರವೆಂದು ಅವರು ಹೇಳಿದ್ದಾರೆ.