ಜಮಾತ್-ಇ-ಇಸ್ಲಾಮಿ ಸದಸ್ಯರ ಬಂಧನ

13/07/2020

ಶ್ರೀನಗರ ಜು.13 : ಪ್ರತ್ಯೇಕತಾವಾದಿ ಟೆಹ್ರೀಕ್ ಇ ಹುರ್ರಿಯತ್ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ಮತ್ತು ನಿಷೇಧಿತ ಜಮಾತ್-ಇ-ಇಸ್ಲಾಮಿ ಸಂಘಟನೆಯ ಕೆಲವು ಸದಸ್ಯರನ್ನು ಬಂಧಿಸಲಾಗಿದ್ದು, ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಕೇಸು ದಾಖಲಿಸಲಾಗುವುದು ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನ ಪರ ಟೆಹ್ರೀಕ್-ಇ-ಹುರ್ರಿಯತ್ ಸಂಘಟನೆಯ ಅಧ್ಯಕ್ಷ ಅಶ್ರಫ್ ಸೆಹ್ರಾಯ್ ಆಗಿದ್ದಾರೆ. ಆತನ ಜೊತೆಗೆ ಇನ್ನೂ ಅನೇಕ ಸಂಘಟನೆ ಸದಸ್ಯರನ್ನು ಕಸ್ಟಡಿಗೆ ಕರೆದೊಯ್ಯಲಾಗಿದೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಇಂದು ಬೆಳಗ್ಗೆ 5.30ರ ಹೊತ್ತಿಗೆ ಬರ್ಜುಲ್ಲಾ ಭಗತ್ ನಲ್ಲಿರುವ ಸೆಹ್ರಾಯ್ ನಿವಾಸಕ್ಕೆ ತಲುಪಿದ ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಸೆಹ್ರಾಯ್ ಕಳೆದ ಆಗಸ್ಟ್ 5ರಿಂದ ಗೃಹಬಂಧನದಲ್ಲಿದ್ದರು.
ರಾಜಕೀಯದಿಂದ ಸಂಪೂರ್ಣ ದೂರವಿರುವುದಾಗಿ ಪ್ರತ್ಯೇಕತಾವಾದಿ ಹಿರಿಯ ನಾಯಕ ಸೈಯದ್ ಆಲಿ ಶಾ ಗಿಲಾನಿ ಘೋಷಿಸಿದ ಕೆಲ ದಿನಗಳ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.