ಜಿಲ್ಲೆಯಲ್ಲಿ ಮತ್ತೆ 5 ಪಾಸಿಟಿವ್ ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆ

ಮಡಿಕೇರಿ ಜು. 13 : ಕೊಡಗು ಜಿಲ್ಲೆಯಲ್ಲಿ ಗಂಟೆ ಗಂಟೆಗೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೆ ಐದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಂಜಾನೆ 10 ಪ್ರಕರಣಗಳು ಪತ್ತೆಯಾಗಿದ್ದು, ಮಧ್ಯಾಹ್ನ 5 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ.
ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 22 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 85 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಅರವತ್ತೊಕ್ಲುವಿನ ಮೈಸೂರಮ್ಮ ಕಾಲೋನಿಯ 18 ವರ್ಷದ ಹುಡುಗನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಕಂಡಕೆರೆ, ಚೆಟ್ಟಳ್ಳಿ ಗ್ರಾಮದ ಆರೋಗ್ಯ ಕಾರ್ಯಕರ್ತರೊಬ್ಬರ 18 ವರ್ಷದ ಮಗನಿಗೆ ಸೋಂಕು ದೃಢಪಟ್ಟಿದೆ. ಕುಶಾಲನಗರದ ಬಲಮುರಿ ದೇವಸ್ಥಾನ ಬಳಿಯ ಜ್ವರ ಲಕ್ಷಣಗಳಿದ್ದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
68 ಮಂದಿ ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ.113 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 3 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೂತನ ನಿಯಂತ್ರಿತ ಪ್ರದೇಶಗಳು: ಗೋಣಿಕೊಪ್ಪದ ಮೈಸೂರಮ್ಮ ಕಾಲೋನಿ, ಅರವತ್ತೊಕ್ಲು, ಸೋಮವಾರಪೇಟೆ ತಾಲ್ಲೂಕಿನ ಕಂಡಕೆರೆ, ಚೆಟ್ಟಳ್ಳಿ ಗ್ರಾಮ, ಬಲಮುರಿ ದೇವಸ್ಥಾನ ಬಳಿ, ಕುಶಾಲನಗರ.
