ಚೆಟ್ಟಳ್ಳಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಡಹಾಗಲ ಬೆಳೆ

July 28, 2020

ಮಡಿಕೇರಿ ಜು. 28 : ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಚಾಪು ಮೂಡಿಸುತ್ತಿರುವ ಲಾಭದಾಯವಾದ ಮಡಹಾಗಲಕಾಯಿ ಬೆಳೆಯು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಉತ್ತಮ ಫಸಲಿನೊಂದಿಗೆ ಕಂಗೊಳಿಸುತ್ತಿದೆ.
ಮಳೆಗಾಲದಲ್ಲಿ ಮಲೆನಾಡಿನ ಕಾಡುಮೇಡುಗಳಲ್ಲಿ ಕಂಡುಬರುವ ಸ್ಥಳೀಯ ಭಾಷೆಯಲ್ಲಿ ಕರೆಯಲ್ಪಡುವ ಪಾವಕ್ಕ, ಕಾಡುಪೀರೆ, ಆಂಗ್ಲಭಾಷೆಯ ಸೈನ್‍ಗಾರ್ಡ್ ಹಲವು ಬಗೆಯ ವಿಟಮಿನ್ ಹೊಂದಿರುವ ಹಾಗೂ ವಿವಿಧ ಖಾದ್ಯವನ್ನು ತಯಾರಿಸಬಲ್ಲ ಸಣ್ಣಗಿನ ಹಾಗಲಕಾಯಿಯಂತೆ ಕಾಣಬರುವ ಮಡಹಾಗಲ ಎಂಬ ಬೆಳೆಯನ್ನು ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನೆಟ್ಟುಬೆಳೆಯಲಾಗುತ್ತಿದೆ. ಅತ್ಯಧಿಕ ಫಸಲು ಹಾಗೂ ಆದಾಯ ಗಳಿಸಬಲ್ಲ ಉನ್ನತ ತಳಿಯ ಮಡಹಾಗಲವನ್ನು ಬೆಳೆದು ಉತ್ತಮ ಫಸಲಿನ ಜೊತೆಗೆ ಈವರೆಗೆ ಸುಮಾರು 40 ಸಾವಿರ ಗಿಡಗಳನ್ನು ರೈತರಿಗೆ ನೀಡಿದ್ದಾರೆ.
2008ರಲ್ಲಿ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕರಾದ ಡಾ. ಭಾರತಿ ಅವರ ಮುತುವರ್ಜಿಯಲ್ಲಿ ಕೊಡಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಹಲವು ಬಗೆಯ ಅಸ್ಸಾಂನ ಮಡಹಾಗಲ ಕಾಯಿ ತಳಿಯನ್ನು ತಂದು ಸಣ್ಣಜಾಗದಲ್ಲಿ ನೆಟ್ಟು ಬೆಳೆಸಿ ಪರೀಕ್ಷಿಸಲಾಗಿ ಉತ್ತಮ ಫಸಲನ್ನು ಪಡೆಯಲಾಯಿತು. ನಾಟಿತಳಿಯಲ್ಲಿ ಪರಾಗಸ್ಪರ್ಶಕ್ರಿಯೆ ಸ್ವಾಭಾವಿಕವಾಗಿದ್ದರೆ ಅಸ್ಸಾಂ ತಳಿಯಲ್ಲಿ ಗಂಡು ಗಿಡದ ಹೂವನ್ನು ಹೆಣ್ಣು ಗಿಡದ ಹೂವಿಗೆ ಸ್ಪರ್ಶಿಸುವ ಮೂಲಕ ಕೃತಕವಾಗಿ ಪರಾಗಸ್ಪರ್ಶ ಕ್ರಿಯೆಯನ್ನು ಮಾಡಬೇಕಾಗುತ್ತದೆ. ನಾಟಿ ತಳಿಗೆ ಹೋಲಿಸಿದರೆ ಅಸ್ಸಾಂ ತಳಿ ಹೆಚ್ಚಿನ ಗಾತ್ರ ಹಾಗೂ ತೂಕ ಹೊಂದಿದೆ.
ಆದ್ದರಿಂದ ಮಲೆನಾಡಿನ ಸ್ಥಳೀಯ ತಳಿಗಳನ್ನು ತಂದು ಸಂಶೋಧಿಸಿ ಅಸ್ಸಾಂ ತಳಿಯ ಮೂಲಕ ಹೊಸತಳಿಯನ್ನು ಕಂಡು ಹಿಡಿದ ಹೆಗ್ಗಳಿಕೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ್ದಾಗಿದೆ.