ಪ್ರವಾಸಿ ಆತಿಥ್ಯ ಸೇವಾ ಗೃಹಗಳ ಮೇಲಿನ ನಿರ್ಬಂಧ ಸಡಿಲ : ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

28/07/2020

ಮಡಿಕೇರಿ ಜು. 28 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿಲ್ಲಿ ಪ್ರವಾಸಿ ಆತಿಥ್ಯ ಸೇವಾ ಗೃಹಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಗೊಳಿಸಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಆದೇಶಿಸಿದ್ದಾರೆ.

ಕೊಡಗು ಜಿಲ್ಲೆಗೆ ಹೊರದೇಶ, ಹೊರರಾಜ್ಯದಿಂದ ಬರುವ ವ್ಯಕ್ತಿಗಳಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದು, ನೆರೆ ಜಿಲ್ಲೆಗಳಿಂದ ಕೊಡಗಿಗೆ ಬಂದ ಪ್ರವಾಸಿಗರು ತಾವು ತಂಗುವ ಲಾಡ್ಜ್, ರೆಸಾರ್ಟ್, ಹೋಂಸ್ಟೇಗಳಿಗೆ ನೇರವಾಗಿ ಬಂದು, ಅಲ್ಲಿಂದಲೇ ವಾಪಾಸ್ ಹಿಂದಿರುಗಬೇಕು. ವಿನಾ ಕಾರಣ ಯಾವುದೇ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡಬಾರದು. ಸರ್ಕಾರದ ಆರೋಗ್ಯ ಸುರಕ್ಷತಾ ಮಾರ್ಗದರ್ಶನಗಳನ್ನು ಆತಿಥ್ಯ ಸೇವೆ ಒದಗಿಸುವ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಸರ್ಕಾರದಿಂದ ನೋಂದಾಯಿತ ಆತಿಥ್ಯ ಸೇವಾ ಗೃಹಗಳಲ್ಲಿ ಮಾತ್ರ ಪ್ರವಾಸಿ ಅತಿಥಿಗಳ ತಂಗುವಿಕೆಗೆ ಅವಕಾಶ ನೀಡಲಾಗಿದ್ದು, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್, ಪೊಲೀಸ್, ಆರೋಗ್ಯ ಇಲಾಖೆಗಳು ಈ ಬಗ್ಗೆ ಗಮನ ನೀಡಬೇಕು. ಆದೇಶ ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಹೊರರಾಜ್ಯ, ಹೊರ ಜಿಲ್ಲೆಗಳಿಂದ ಕೊಡಗಿಗೆ ಬಂದ ಅತಿಥಿಗಳು 14 ದಿನಗಳ ಸಂಪರ್ಕ ತಡೆಯಲ್ಲಿ ಕಡ್ಡಾಯವಾಗಿ ಇರತಕ್ಕದ್ದು. ಸಂಪರ್ಕ ತಡೆಯಿಂದ ಹೊರಬಂದು, ಸಾರ್ವಜನಿಕವಾಗಿ ತಿರುಗಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಮದ್ಯ ಮಾರಾಟಕ್ಕೆ ಅವಕಾಶ: ಜಿಲ್ಲೆಯ ಗಡಿಭಾಗಗಳಲ್ಲಿ ಇರುವ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಜಿಲ್ಲಾಧಿಕಾರಿಗಳು, ಆದರೆ ಕಂಟೈನ್‍ಮೆಂಟ್ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ. ಕಂಟೈನ್‍ಮೆಂಟ್ ಹೊರಭಾಗದ ವಲಯದಲ್ಲಿ ಸರಕಾರದ, ಅಬಕಾರಿ ಇಲಾಖೆಯ ಮಾರ್ಗಸೂಚಿಯಡಿ ಕಾರ್ಯಾಚರಿಸಬೇಕು. ಹಾಗೂ ನಿಯಮಾನುಸಾರ ಟೇಕ್‍ಅವೇ ರೂಪದಲ್ಲಿ ಮಾತ್ರ ಮಾರಾಟ ಮಾಡಬೇಕು ಎಂದು ಆದೇಶಿಸಿದ್ದಾರೆ.

ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತಹ ಸನ್ನದುಗಳ ಪರವಾನಗಿಯನ್ನು ರದ್ದುಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.