ಭೂ ಕಾಯ್ದೆ : ದೇವೇಗೌಡ ಅಸಮಾಧಾನ

29/07/2020

ಬೆಂಗಳೂರು ಜು.28 : ಭೂ ಸುಧಾರಣಾ ಕಾಯಿದೆ ರದ್ದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮತ್ತು ಕೈಗಾರಿಕಾ ನಿಯಮ ತಿದ್ದುಪಡಿ ಮತ್ತಿತರ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಜೆಡಿಎಸ್ ಸದಸ್ಯ ಎಚ್.ಡಿ.ದೇವೇಗೌಡ ಸರ್ಕಾರ ಸುಗ್ರೀವಾಜ್ಞೆಗಳನ್ನು ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಮೂರು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-ಎ, 79-ಬಿ, 79-ಸಿ ರದ್ದು ಮಾಡಿರುವುದು ರೈತರೋಧಿ ಕ್ರಮವಾಗಿದೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ರಾಜ್ಯಕ್ಕೆ ಮಾರಕವಾಗಿದೆ ಮತ್ತು ಕೈಗಾರಿಕೆ ವಿಚಾರ ಹಾಗೂ ಮತ್ತಿತರ ನಿಯಮಗಳ ತಿದ್ದುಪಡಿ ಮಾಡಿ ಸರ್ಕಾರ ರೈತ ವಿರೋಧಿ ತೀರ್ಮಾನಗಳನ್ನೂ ತೆಗೆದುಕೊಂಡಿದೆ. ಮಹಾಮಾರಿ ಕೊರೊನಾ ಕಾರಣ ಇಷ್ಟು ದಿನ ತಾವು ಈ ಬಗ್ಗೆ ಧ್ವನಿಯೆತ್ತಿರಲಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದೆಂದು ಹಿಂದೆ ಸರಿದಿದ್ದೆ, ಹೀಗೆ ಮುಂದುವರಿದರೆ ನಮ್ಮ ಜನತೆಗೆ ತೊಂದರೆಯಾಗುತ್ತದೆ ಎಂದು ಈ ದಿನ ಮಾಧ್ಯಮಗಳ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿರುವುದಾಗಿ ದೇವೇಗೌಡ ಸ್ಪಷ್ಟಪಡಿಸಿದರು.