ಆ. 1 ರಿಂದ ರಾಸುಗಳ ತಳಿ ಉನ್ನತೀಕರಣ ಯೋಜನೆ ಪ್ರಾರಂಭ

31/07/2020

ಮಡಿಕೇರಿ ಜು.31 : ರಾಷ್ತ್ರೀಯ ಗೋಕುಲ್ ಮಿಷನ್ ಯೋಜನೆಯಡಿಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕೊಡಗು ಜಿಲ್ಲೆ ವತಿಯಿಂದ ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಯೋಜನೆ(ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ) ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮವು 2020ರ ಆಗಸ್ಟ್, 01 ರಿಂದ ಪ್ರಾರಂಭಗೊಂಡು 2021 ರ ಮೇ, 31 ರವರೆಗೆ ಚಾಲ್ತಿಯಲಿದೆ.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿನ ಹಸು ಮತ್ತು ಎಮ್ಮೆಗಳಲ್ಲಿ ಉತ್ಕೃಷ್ಟ ದೇಶಿ ಮತ್ತು ವಿದೇಶಿ ತಳಿಗಳ ವೀರ್ಯವನ್ನು ಬಳಸಿ ರೈತರ ಜಾನುವಾರುಗಳಿಗೆ ಉಚಿತವಾಗಿ ಕೃತಕ ಗರ್ಭಧಾರಣೆ ಮಾಡಲಾಗುವುದು. ಇದರ ಮುಖಾಂತರ ಉತ್ತಮ ಗುಣಮಟ್ಟದ ಕರುಗಳ ಜನನದಿಂದ ರಾಸುಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಈ ಯೋಜನೆಯು ಭಾರತ ಸರ್ಕಾರದ ವತಿಯಿಂದ ಘೋಷಿಸಲ್ಪಟ್ಟಿದ್ದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಅನುಸ್ಟಾನಗೊಳಿಸಲಾಗುತ್ತಿದೆ. ಕೊಡಗು ಜಿಲ್ಲೆಯ ಎಲ್ಲಾ 303 ಗ್ರಾಮಗಳನ್ನು ಈ ಕಾರ್ಯಕ್ರಮಕ್ಕೆ ಅಳವಡಿಸಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಹಾಲು ಉತ್ಪಾದನೆ ಸಾಮಥ್ರ್ಯ ಹೊಂದಿರುವ ದೇಶಿ, ಮತ್ತು ವಿದೇಶಿ, ತಳಿಗಳ ವೀರ್ಯಗಳನ್ನು ಬಳಸಲಾಗುತ್ತದೆ. ಈ ಕಾರ್ಯಕ್ರಮದಡಿ ಕೃತಕ ಗರ್ಭಧಾರಣಾ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ರೈತ ಬಾಂದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಎ.ಬಿ.ತಮ್ಮಯ್ಯ ಅವರು ಕೋರಿದ್ದಾರೆ.