ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ

August 1, 2020

ಬೆಂಗಳೂರು ಆ. 1 : ನೂತನ ರಾಷ್ಟ್ರೀಯ ಶಿಕ್ಷಣ ನೀತಿ-ಎನ್‍ಇಪಿ-2019 ನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ನೂತನ ರಾಷ್ಟ್ರೀಯ ನೀತಿ ಅನುಮೋದನೆಗೊಂಡ ನಂತರ ಇಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರಾದ ಡಾ. ಕೆ.ಕಸ್ತೂರಿರಂಗನ್ ಅವರೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿದ ಅವರು, ವಿವಿಧ ಸ್ತರಗಳ, ನಾನಾ ಅಂತರಗಳಿರುವ ಈ ರಾಷ್ಟ್ರದ ಎಲ್ಲರಿಗೂ ಅನ್ವಯವಾಗಬಹುದಾದ ನೂತನ ಶಿಕ್ಷಣ ನೀತಿಯ ನ್ನು ಶ್ರಮವಹಿಸಿ ರೂಪಿಸಿದ್ದಕ್ಕೆ ಕಸ್ತೂರಿರಂಗನ್ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು.
34 ವರ್ಷಗಳ ಬಳಿಕ ಇಂದಿನ ಹಾಗೂ ಭವಿಷ್ಯದ ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ನೀತಿಯಾಗಿದೆ. ಇದು ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುವಂತಹ ಒಂದು ಗಟ್ಟಿಯಾದ ನೀತಿಯಾಗಿದೆ. ಇಂತಹ ನೀತಿಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ಉತ್ಸುಕವಾಗಿದೆ ಎಂದು ಸಚಿವರು ಹೇಳಿದರು.

error: Content is protected !!