ಹಾರಂಗಿ ಜಲಾಶಯದ ನೀರಿನ ಮಟ್ಟ

06/08/2020

ಮಡಿಕೇರಿ ಆ. 6 :

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.16 ಅಡಿಗಳು, ಕಳೆದ ವರ್ಷ ಇದೇ ದಿನ 2835.16 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 38.20 ಮಿ.ಮೀ., ಕಳೆದ ವರ್ಷ ಇದೇ ದಿನ 16.80 ಮಿ.ಮೀ. ಇಂದಿನ ನೀರಿನ ಒಳಹರಿವು 9081 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2559 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 11811, ನಾಲೆಗೆ 300. ಕಳೆದ ವರ್ಷ ಇದೇ ದಿನ ನದಿಗೆ 1400, ನಾಲೆಗೆ 700 ಕ್ಯುಸೆಕ್.
ಮಳೆ ಸಂಬಂಧ ಮಾಹಿತಿ: ಕಳೆದ ಐದು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ಜಿಲ್ಲೆಯ ಹಲವು ಕಡೆ ರಸ್ತೆಗೆ ಮತ್ತು ವಿದ್ಯುತ್ ಕಂಬಕ್ಕೆ ಮರಗಳು ಬಿದ್ದು ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹಾಗೆಯೇ ಹೆದ್ದಾರಿಗಳಲ್ಲಿ ಬರೆ ಕುಸಿದಿರುವುದನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗದಂತೆ ಜಿಲ್ಲಾಡಳಿತ ನೋಡಿಕೊಂಡಿದೆ.
ಹಾಗೆಯೇ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ ಹಾಗೆಯೇ ವಿರಾಜಪೇಟೆಯ ನೆಹರು ನಗರ, ಅಯ್ಯಪ್ಪ ಸ್ವಾಮಿ ಬಡಾವಣೆ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಹಲವು ರಕ್ಷಣಾ ಕಾರ್ಯಗಳಲ್ಲಿ ಜಿಲ್ಲಾಡಳಿತ, ಪೊಲೀಸ್, ಅರಣ್ಯ, ಸೆಸ್ಕ್, ಅಗ್ನಿ ಶಾಮಕ, ಎನ್‍ಡಿಆರ್‍ಎಫ್ ತಂಡಗಳು ಕಾರ್ಯ ಪ್ರವೃತ್ತವಾಗಿವೆ.
ನಾಡಿನ ಜೀವನದಿ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಬಲಮುರಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಸೇರಿದಂತೆ ಹಲವು ಜಲಪಾತಗಳು ಭೋರ್ಗರೆಯುತ್ತಿವೆ.
ಜಿಲ್ಲೆಯಾದ್ಯಂತ ಮುಂಗಾರು ಚುರುಕಾಗಿದೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಕೊಂಚ ವಿರಾಮ ನೀಡಿದ್ದ ಮಳೆ, ಆಗಸ್ಟ್ ಮೊದಲನೆಯ ವಾರದಲ್ಲಿ ಮತ್ತಷ್ಟು ಬಿರುಸುಗೊಂಡಿದೆ.
ಈ ಮೂಲಕ ಜಿಲ್ಲೆಯ ಕೆರೆ ಕಟ್ಟೆ ಮತ್ತು ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಕರುನಾಡ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ.
ಆಗಸ್ಟ್ 1 ರ ಶನಿವಾರ ದಂದು 15.51 ಮಿ.ಮೀ ಇದ್ದ ಜಿಲ್ಲಾ ಸರಾಸರಿ ಮಳೆ, ಆಗಸ್ಟ್ 2 ರ ಭಾನುವಾರದಂದು 11.53 ಮಿ.ಮೀಗೆ ಇಳಿಕೆ ಕಂಡಿತು. ಆದರೆ ಸೋಮವಾರದ ವೇಳೆಗೆ ಮುಂಗಾರು ಬಿರುಸುಗೊಂಡಿದ್ದರಿಂದ ಆಗಸ್ಟ್ 3 ರಂದು ಜಿಲ್ಲಾ ಸರಾಸರಿ ಮಳೆ 50.92 ಮಿ.ಮೀ ಗೆ ಏರಿಕೆ ಕಂಡಿತು. ಬಳಿಕ ಮತ್ತಷ್ಟು ಚುರುಕಾದ ಮುಂಗಾರಿನಿಂದಾಗಿ ಆಗಸ್ಟ್ 4 ರಂದು ಜಿಲ್ಲಾ ಸರಾಸರಿ 106.12 ಮಿ.ಮೀಗೆ ಏರಿತು. ಆಗಸ್ಟ್ 5 ರ ಬುಧವಾರದಂದು ಜಿಲ್ಲಾ ಸರಾಸರಿ ಮಳೆಯು 142.59 ಮಿ.ಮೀ ದಾಖಲಾಯಿತು. ಆಗಸ್ಟ್ 6 ರ ಗುರುವಾರದ ವೇಳೆಗೆ ಜಿಲ್ಲಾ ಸರಾಸರಿ ಮಳೆಯು 162.4 ಮಿ.ಮೀಗೆ ಏರಿಕೆ ಕಂಡಿತು.
ಭಾಗಮಂಡಲ ಹೋಬಳಿಯಲ್ಲಿ ಗುರುವಾರ ಬೆಳಗ್ಗೆ 8:30 ರ ವೇಳೆಗೆ ಸುರಿದ ಮಳೆಯ ಪ್ರಮಾಣ 486.6 ಮಿ.ಮೀ ಆಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ.

ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಅವರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುತ್ತಾರೆ.
ತಲಕಾವೇರಿಯ ಮನೆ ಖಾಲಿ ಇರುತ್ತದೆ. ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿರುತ್ತಾರೆ. 04 ಜನ ಕಾಣೆಯಾಗಿರುವ ಮಾಹಿತಿ ಇದೆ. ಜಿಲ್ಲೆಯ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ 5 ರ ಬುಧವಾರದಂದು ಸುರಿದ ಭಾರೀ ಮಳೆಯಿಂದಾಗಿ ಕುಶಾಲನಗರದ ಕುವೆಂಪು ಬಡಾವಣೆ, ಸಾಯಿ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ.
ಮಡಿಕೇರಿ-ಸೋಮವಾರಪೇಟೆ ರಸ್ತೆ, ಸಂಪಿಗೆಕಟ್ಟೆ, ಪಿಂಟೋಟರ್ನ್ ಬಳಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದು, ವಿದ್ಯುತ್ ಕಂಬಗಳು ತುಂಡಾಗಿವೆ. ಈ ಪ್ರದೇಶದಲ್ಲಿ ತೆರವು ಕಾರ್ಯ ಪ್ರಗತಿಯಲ್ಲಿದೆ.
ಬೇತ್ರಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಮಡಿಕೇರಿ-ಪ್ರಾದೇಶಿಕ ಸಾರಿಗೆ ಕಚೇರಿ ರಸ್ತೆ ಮಾರ್ಗದಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದವರಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಎಮ್ಮೆಮಾಡು ಗ್ರಾ.ಪಂ.ವ್ಯಾಪ್ತಿಯ ಮನೆ ಮೇಲೆ ಬುಧವಾರ ರಾತ್ರಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಈ ಮನೆಯ ಎಲ್ಲಾ ಸದಸ್ಯರನ್ನು ಬುಧವಾರ ರಾತ್ರಿಯೇ ಅವರ ಸಂಬಂಧಿಕರ ಮನೆಗಳಿಗೆ ಕಳುಹಿಸಲಾಗಿದೆ ಹಾಗೂ ಅವರ ಮನೆಯ ವಸ್ತುಗಳನ್ನು ಪಕ್ಕದ ಮನೆಗೆ ಸಾಗಿಸಲಾಗಿದೆ.
ಗೋಣಿಕೊಪ್ಪ-ಪಾಲಿಬೆಟ್ಟ ಮಾರ್ಗದ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಮಾದಾಪುರ ಹೊಸತೋಟದ ಬಳಿಯ ಎಂ.ಎಲ್.ಎ ಬಸ್ ನಿಲ್ದಾಣದಲ್ಲಿ ಬೃಹತ್ ಮರ ತೆರವುಗೊಳಿಸಲಾಗಿದೆ.
ಎಮ್ಮೆಮಾಡು ಗ್ರಾಮದ ಪಡಿಯಣಿ ಭಾಗದ ಕೊಯಮ್ಮ ಅವರ ಮನೆಯು ಕಾವೇರಿ ಹೊಳೆಯ ಹಿನ್ನೀರಿನಲ್ಲಿ ಮುಳುಗಿದೆ. ಮನೆಯ ಎಲ್ಲಾ ಸದಸ್ಯರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಅವರ ಮನೆಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ.
ಎಮ್ಮೆಮಾಡುವಿನ ಗ್ರಾಮದ ದೊಡ್ಡ ಮಸೀದಿ ಹಿಂಭಾಗದ ಮನೆಗೆ ಕಾವೇರಿ ಹೊಳೆ ನೀರು ಬಂದಿದ್ದು, ಕುಟುಂಬದವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ.
ವಿರಾಜಪೇಟೆ ತಾಲೂಕಿನ ನಾಲ್ಕೇರಿ ರಸ್ತೆ ಮಾರ್ಗ 7 ರಿಂದ 10 ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದ್ದು, ತೆರವು ಕಾರ್ಯ ಪ್ರಗತಿಯಲ್ಲಿದೆ.
ನೆಲ್ಯಹುದಿಕೇರಿ ಬೆಟ್ಟದ ಕಾಡು ಗ್ರಾಮದ 150 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳಿದವರನ್ನೂ ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್ ಅವರು ತಿಳಿಸಿದ್ದಾರೆ.
ಮಡಿಕೇರಿ–ವಿರಾಜಪೇಟೆ ರಸ್ತೆಯ ಬೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಠಿಯಿಂದ ಬೇತ್ರಿ ಸೇತುವೆ ಮೇಲಿನ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಾರ್ವಜನಿಕರು ಮೂರ್ನಾಡು – ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ,ಮಡಿಕೇರಿ–ಮರಗೋಡು-ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ, ಕುಶಾಲನಗರ-ಗುಡ್ಡೆಹೊಸೂರು-ನೆಲ್ಲಿಹುದಿಕೇರಿ-ಸಿದ್ದಾಪುರ-ಅಮ್ಮತ್ತಿ-ವಿರಾಜಪೇಟೆ, ಸುಂಟಿಕೊಪ್ಪ- ಚೆಟ್ಟಳ್ಳಿ-ನೆಲ್ಲಿಹುದಿಕೇರಿ-ಸಿದ್ದಾಪುರ-ಅಮ್ಮತ್ತಿ-ವಿರಾಜಪೇಟೆ ಬದಲಿ ಮಾರ್ಗಗಳನ್ನು ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡುತ್ತದೆ.
ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಸಂ:221077 ಮತ್ತು ವಾಟ್ಸಪ್ ಸಂ:8550001077 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಇದರೊಂದಿಗೆ ಆಗಸ್ಟ್ 7 ರ ವರೆಗೂ ಸಹ ಹೆಚ್ಚಿನ ಮಳೆ ಮುಂದುವರೆಯಲಿದ್ದು, ನದಿ ಪಾತ್ರದ ಜನತೆ, ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿರುವ ಜನರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿಗೂ ಸಹ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜೀವ ಕಳೆ ಮರಳಿದೆ. ಹಾರಂಗಿ ಜಲಾಶಯಕ್ಕೆ ಆಗಸ್ಟ್ 1 ರಂದು 575 ಕ್ಯೂಸೆಕ್ ಒಳಹರಿವು ಇದ್ದು, ಆಗಸ್ಟ್ 6 ರ ವೇಳೆಗೆ ಒಳ ಹರಿವಿನ ಪ್ರಮಾಣವು 9081 ಕ್ಯೂಸೆಕ್ ಆಗಿದೆ. ಹೊರಹರಿವಿನ ಪ್ರಮಾಣ ನದಿಗೆ 11811 ಕ್ಯುಸೆಕ್ ಆಗಿದ್ದು, ನಾಲೆಗೆ 300 ಕ್ಯುಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಆಗಸ್ಟ್ 07 ರ ವರೆಗೆ ಮಳೆ ಮುಂದುವರೆಯಲಿದ್ದು, ಈ ನಿಟ್ಟಿನಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡುವ ಸಾಧ್ಯತೆ ಇದ್ದು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.