ಎಮ್ಮೆಮಾಡಿನಲ್ಲಿ ಮರ ಬಿದ್ದು ಮನೆಗೆ ಹಾನಿ : ವಿಶೇಷ ಪ್ರಕರಣವೆಂದು ಪರಿಗಣಿಸಲು ಡಿಸಿಸಿ ಒತ್ತಾಯ

07/08/2020

ಮಡಿಕೇರಿ ಆ.7 : ನಿರಂತರವಾಗಿ ಸುರಿಯುತ್ತಿದ್ದ ಮಳೆ ಮತ್ತು ವೇಗವಾಗಿ ಬೀಸುತ್ತಿದ್ದ ಗಾಳಿಯ ಪರಿಣಾಮ ಭಾರೀ ಗಾತ್ರದ ಮರ ಬಿದ್ದು ವಾಸದ ಮನೆವೊಂದು ಸಂಪೂರ್ಣವಾಗಿ ನಾಶವಾದ ಘಟನೆ ಎಮ್ಮೆಮಾಡು ಗ್ರಾಮದಲ್ಲಿ ಬುಧವಾರ ನಡೆದಿದೆ.

ಅದೃಷ್ಟವಶಾತ್ ಮನೆಯಲ್ಲಿದ್ದವರು ಚಿಕ್ಕಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಗಾತ್ರದ ಮರ ಮನೆಯ ಮಧ್ಯಭಾಗಕ್ಕೆ ಬಿದ್ದರೂ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿ ರುವುದಿಲ್ಲ.

ಎಮ್ಮೆಮಾಡು ಗ್ರಾಮದ ಪಡಿಯಾನಿಯ ಅರೆಯಂಡ ಅಬ್ದುಲ್ ರಹಿಮಾನ್ ಎಂಬುವರಿಗೆ ಸೇರಿದ್ದ ಮನೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಇಡೀ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ. ಈ ಭಾಗದಲ್ಲಿ ನಿರಂತರವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಮನೆಯ ಹಿಂಭಾಗದಲ್ಲಿದ್ದ ಭಾರಿ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದಿದೆ. ಈ ವೇಳೆ ಅಬ್ದುಲ್ ರಹಿಮಾನ್ ಅವರ ಪತ್ನಿ ಸಫಿಯಾ ಅವರ ಕೈಗೆ ಪೆಟ್ಟಾಗಿದೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಗ್ರಾಮಸ್ಥರು, ಸಂತ್ರಸ್ತ ಕುಟುಂಬವನ್ನು ಪಕ್ಕದ ಮನೆಗೆ ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಬೇರೆಡೆಗೆ ಸಾಗಿಸಿ ಸಹಕರಿಸಿದರು ಎನ್ನಲಾಗಿದೆ.

ನಂತರ ರಾತ್ರಿ ಇಡೀ ಬಿರುಸಿನ ಮಳೆ ಮುಂದುವರಿದ ಕಾರಣ ಮನೆಯ ಮೇಲಿನ ಭಾಗಕ್ಕೆ ನೀರು ನುಗ್ಗಿ ಮನೆಯ ಗೋಡೆಗಳಲ್ಲಿ ಕುಸಿದುಬಿದ್ದಿದೆ. ಇದರಿಂದ ಬುಧವಾರ ಬೆಳಗ್ಗಿನ ಸಮಯದಲ್ಲಿ ಮನೆಯ ಗೋಡೆಗಳೆಲ್ಲಾ ಬಹುತೇಕ ಕುಸಿದು ಮಣ್ಣು ಪಾಲಾಗಿದೆ.

ಘಟನಾ ಸ್ಥಳಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ಅಧ್ಯಕ್ಷ ರಾದ ಕೆ.ಕೆ. ಮಂಜುನಾಥ್ ಕುಮಾರ್ ಅವರು, ಮಣ್ಣುಪಾಲಾದ ಮನೆಯ ಭಾಗವನ್ನು ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಸದ ಮನೆಯೊಂದು ಸಂಪೂರ್ಣವಾಗಿ ನಾಶಗೊಂಡು ವಾಸಕ್ಕೆ ಅಯೋಗ್ಯವಾಗಿರುವ ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಲಾಗಿದೆ. ಪ್ರಕೃತಿ ವಿಕೋಪದಡಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪೂರ್ಣ ಪ್ರಮಾಣದ ಪರಿಹಾರ ಧನ ಬಿಡುಗಡೆಗೊಳಿಸಬೇಕು. ಇದೀಗ ಮನೆ ಕಳೆದುಕೊಂಡಿರುವ ಬಡಕುಟುಂಬ ಅತಂತ್ರ ಸ್ಥಿತಿಯಲ್ಲಿದ್ದು, ಅವರಿಗೆ ಬದಲಿ ಮನೆ ನಿರ್ಮಾಣವಾಗುವವರೆಗೆ ಪ್ರತಿ ತಿಂಗಳು ಜಿಲ್ಲಾಡಳಿತ ಸಹಾಯಧನ ನೀಡಬೇಕು. ಅಲ್ಲದೆ ಕೂಡಲೇ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರು ಮಾತನಾಡಿ, ಪ್ರಕೃತಿ ವಿಕೋಪದಡಿ ಸಂತ್ರಸ್ತರಾಗುವ ಬಡವರ್ಗದ ಅತಂತ್ರ ಸ್ಥಿತಿಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಎಮ್ಮೆಮಾಡು ಗ್ರಾಮದ ಅಬ್ದುಲ್ ರಹಿಮಾನ್ ಅವರ ಮನೆ ಪೂರ್ಣವಾಗಿ ನಾಶ ಕೊಂಡಿದ್ದರಿಂದ ಕೂಡಲೇ ಜಿಲ್ಲಾಡಳಿತ ಸಂತ್ರಸ್ತ ಕುಟುಂಬಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಎಂ.ಎ. ಉಸ್ಮಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎ.ಇಸ್ಮಾಯಿಲ್, ಎಮ್ಮೆಮಾಡು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಎಂ ಹಂಸ, ಕಾರ್ಯದರ್ಶಿ ಎನ್. ಎಂ.ಅಬ್ದುಲ್ ಅಜ್ಹಿಜ್ಹ್, ಎಮ್ಮೆಮಾಡು ಗ್ರಾಮ ಪಂಚಾಯತಿ ಸದಸ್ಯರಾದ ಅರೆಯಂಡ ಹಂಸು,ವಿರಾಜಪೇಟೆ ಪಟ್ಟಣ ಪಂಚಾಯತಿ ಸದಸ್ಯರಾದ ಡಿ.ಪಿ.ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಝುಬೈರ್ ಕಡಂಗ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಆಲೀರ ಎಂ. ರಶೀದ್ ಮೊದಲಾದವರು ಹಾಜರಿದ್ದರು.