ವಿದ್ಯುತ್ ತಂತಿ ಸ್ಪರ್ಷ : ಅಜ್ಜಿಮುಟ್ಟ ಗ್ರಾಮದ ವ್ಯಕ್ತಿ ಸಾವು

14/08/2020

ಮಡಿಕೇರಿ ಆ.14 : ಮರಕ್ಕೆ ಒರಗಿಸಿದ್ದ ಏಣಿಗೆ ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಾಪೋಕ್ಲು ಸಮೀಪದ ಅಜ್ಜಿಮುಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕಂಗಂಡ ನಂದ ಬೆಳ್ಯಪ್ಪ(63) ಎಂಬುವವರೇ ಸಾವನ್ನಪ್ಪಿರುವ ದುರ್ದೈವಿ. ಮರಕ್ಕೆ ಒರಗಿಸಿದ್ದ ಏಣಿಯನ್ನು ತೆಗೆಯುವ ಹಂತದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ, ತೀವ್ರ ಸ್ವರೂಪದ ವಿದ್ಯುದಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಗ್ರಾಮ ವ್ಯಾಪ್ತಿಯಲ್ಲಿನ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯವನ್ನು ಚೆಸ್ಕಾಂ ನೌಕರರು ಅದಾಗಷ್ಟೆ ಪೂರ್ಣಗೊಳಿಸಿ, ವಿದ್ಯುತ್ ಸಂಪರ್ಕವನ್ನು ನೀಡಿದ್ದರು. ಈ ಹಂತದಲ್ಲಿ ದುರ್ಘಟನೆ ಸಂಭವಿಸಿದೆ. ನಾಪೋಕ್ಲು ಠಾಣಾ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.