ಆ. 27ರಂದು ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣಾ ದಿನ : ಶಿಲಾ ಸ್ಮಾರಕ ಅನಾವರಣ : ಜಿಲ್ಲೆಯ ವಿವಿಧೆಡೆ ಕಿಟ್ ವಿತರಣೆ

ಮಡಿಕೇರಿ, ಆ.24: ಮಾಜಿ ಶಾಸಕ ಮತ್ತು ಹಿರಿಯ ನ್ಯಾಯವಾದಿಗಳಾಗಿದ್ದ ಎ.ಕೆ.ಸುಬ್ಬಯ್ಯ ಅವರು ನಿಧನರಾಗಿ ಇದೇ ತಿಂಗಳ 27 ರಂದು ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎ.ಕೆ. ಸುಬ್ಬಯ್ಯ- ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ (ರಿ.) ವತಿಯಿಂದ ಮೊದಲ ವರ್ಷದ ‘ಪುಣ್ಯಸ್ಮರಣಾ ದಿನ’ವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿಗಳೂ ಆಗಿರುವ, ಹಿರಿಯ ವಕೀಲ ಮತ್ತು ಎ.ಕೆ.ಎಸ್. ಪುತ್ರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆ.27ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಹುದಿಕೇರಿ ಸಮೀಪದ ಕೋಣಗೇರಿಯ ಕಲ್ಲುಗುಂಡಿ ಎಸ್ಟೇಟ್ ನಲ್ಲಿರುವ ಸುಬ್ಬಯ್ಯನವರ ಸಮಾಧಿ ಬಳಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾ ಸ್ಮಾರಕದ ಅನಾವರಣ, ಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.
ದಿ. ಎ.ಕೆ. ಸುಬ್ಬಯ್ಯನವರ ಮೊದಲ ವರ್ಷದ ‘ಪುಣ್ಯಸ್ಮರಣಾ ದಿನ’ದ ಅಂಗವಾಗಿ ಟ್ರಸ್ಟ್ ವತಿಯಿಂದ 3 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಅರ್ಹ ಫಲಾನುಭವಿಗಳಿಗೆ ‘ದಿನಸಿ ಕಿಟ್’ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿರುವ ಎ.ಎಸ್. ಪೊನ್ನಣ್ಣ ಅವರು, ಆ.27ರಂದು ಬೆಳಿಗ್ಗೆ 11:30 ಗಂಟೆಗೆ ನಾಪೋಕ್ಲಿನ ಸಂತೆಮಾಳ ಅವರಣದಲ್ಲಿ ಮೊದಲ ದಿನದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಂತರ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ಕಾರ್ಯಕ್ರಮವಿದೆ ಎಂದು ತಿಳಿಸಿದ್ದಾರೆ.
ಆ.28 ರಂದು ಶುಕ್ರವಾರ 2ನೇ ದಿನದ ಕಾರ್ಯಕ್ರಮವಾಗಿ ವಿರಾಜಪೇಟೆಯಲ್ಲಿ ‘ದಿನಸಿ ಕಿಟ್’ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಅರಸು ನಗರ, ಬೆಳಗ್ಗೆ 11 ಗಂಟೆಗೆ ಮಾರಿಯಮ್ಮ ದೇವಸ್ಥಾನದ ಆವರಣ, ಮಧ್ಯಾಹ್ನ12 ಗಂಟೆಗೆ ಸುಣ್ಣದ ಬೀದಿಯ ಸಮುದಾಯ ಭವನ ಮತ್ತು ಮಧ್ಯಾಹ್ನದ ನಂತರ ವಿರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ದಿನಸಿ ಕೀಟ್ ಗಳನ್ನು ವಿತರಿಸಲಾಗುವುದು ಎಂದು ಪೊನ್ನಣ್ಣ ಅವರು ತಿಳಿಸಿದ್ದಾರೆ.
ಆ.29ರಂದು 3ನೇ ದಿನದ ಕಾರ್ಯಕ್ರಮವಾಗಿ ಬೆಳಿಗ್ಗೆ 10 ಗಂಟೆಗೆ ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ಗಿರಿಜನ ಹಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ ‘ದಿನಸಿ ಕಿಟ್’ ಗಳನ್ನು ವಿತರಿಸಲಾಗುವುದು ಎಂದು ವಿವರಿಸಿರುವ ಪೊನ್ನಣ್ಣ ಅವರು, ಈಗಾಗಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಟೋಕನ್ ವಿತರಿಸಲಾಗಿದ್ದು, ಟೋಕನ್ ತಂದವರಿಗೆ ಕಾರ್ಯಕ್ರಮದಲ್ಲಿ ‘ದಿನಸಿ ಕೀಟ್’ ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಎ.ಕೆ.ಸುಬ್ಬಯ್ಯ ಅವರ ಮೊದಲ ವರ್ಷದ ಪುಣ್ಯ ಸ್ಮರಣಾ ದಿನವನ್ನು ವಿರಾಜಪೇಟೆಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಅಲ್ಲದೆ ಇದರ ಅಂಗವಾಗಿ ಕೆಲವು ಜನೋಪಯೋಗಿ ಶಾಶ್ವತ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ ಭೀತಿಯ ನಿರ್ಬಂಧದಿಂದಾಗಿ ಇದು ಸಾಧ್ಯವಾಗಲಿಲ್ಲ. ಮುಂದೆ ಪರಿಸ್ಥಿತಿ ಸುಧಾರಿಸಿದ ನಂತರ ಕಾರ್ಯಕ್ರಮದ ರೂಪುರೇಷೆಯನ್ನು ತಯಾರಿಸಲಾಗುವುದು ಎಂದು ಎ.ಎಸ್. ಪೊನ್ನಣ್ಣ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
