ಕುಶಾಲನಗರದಲ್ಲಿ ಯುವ ಕಾಂಗ್ರೆಸ್ ಸಭೆ : ಕಾಂಗ್ರೆಸ್ ಇತಿಹಾಸ ತಿಳಿಯಲು ವಿದ್ಯಾ ಬಾಲಚಂದ್ರನ್ ಕರೆ

25/08/2020

ಕುಶಾಲನಗರ ಆ.25 : ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆ ಕುಶಾಲನಗರದಲ್ಲಿ ನಡೆಯಿತು.
ಸ್ಥಳೀಯ ಖಾಸಗಿ ಲಾಡ್ಜ್ ಸಭಾಂಗಣದಲ್ಲಿ ನಡೆದ ಸಭೆಯನ್ನು ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾ ಬಾಲಚಂದ್ರನ್ ಉದ್ಘಾಟಿಸಿದರು. ಕಾಂಗ್ರೆಸ್‍ನ ಇತಿಹಾಸ ಅರಿತರೆ ಮಾತ್ರ ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಯ ಬಗ್ಗೆ ಮನದಟ್ಟಾಗಲು ಸಾಧ್ಯ ಎಂದು ಹೇಳಿದ ವಿದ್ಯಾ ಬಾಲಚಂದ್ರನ್, ಯಾವುದೇ ಸಾಧನೆ ಮಾಡದೆ ಕೇಂದ್ರದಲ್ಲಿ ಬಿಜೆಪಿ ಸರಕಾರ ದೇಶವನ್ನು ಅವನತಿಯತ್ತ ದೂಡುತ್ತಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಮಾಡಿದ ಸಾಧನೆಗಳು, ಯೋಜನೆಗಳನ್ನು ತಮ್ಮ ಸಾಧನೆ ಎಂದು ಬಿಂಬಿಸಿ ಜನರಿಗೆ ತಪ್ಪು ಮಾಹಿತಿ ಒದಗಿಸುತ್ತಿದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್‍ನ ರಾಜ್ಯ ಉಪಾಧ್ಯಕ್ಷ ಕೆಂಪರಾಜು ಗೌಡ ಮಾತನಾಡಿ, ಯಾವುದೇ ಹಣಬಲ, ಅಧಿಕಾರ, ಜಾತಿಬಲ ಇಲ್ಲದ ವ್ಯಕ್ತಿ ನಾಯಕನಾಗಲು ಬಯಸಿದಲ್ಲಿ ಅಂತಹವರಿಗೆ ಯುವ ಕಾಂಗ್ರೆಸ್‍ನ ಬಾಗಿಲು ಸದಾ ತೆರೆದಿರುತ್ತದೆ. ಪ್ರಸಕ್ತ ಕಾಂಗ್ರೆಸ್‍ನ ಪಕ್ಷದಲ್ಲಿ ಹಲವು ಮುಂಚೂಣಿ ನಾಯಕರು ಯುವ ಕಾಂಗ್ರೆಸ್‍ನ ಕೊಡುಗೆಯಾಗಿದ್ದು ಪ್ರಸಕ್ತ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಿಥುನ್ ಹಾನಗಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಮ್ಮಡ ಸೋಮಣ್ಣ, ಯುವ ಕಾಂಗ್ರೆಸ್ ಮುಖಂಡ ರಿಷಿಕುಮಾರ್ ಮಾತನಾಡಿದರು.
ಯುವ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಹನೀಫ್ ಸಂಪಾಜೆ ಪ್ರಾಸ್ತಾವಿಕ ನುಡಿಗಳಾಡಿದರು.
ಸ್ಥಳೀಯ ಕೆಲವು ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವಲಯ, ಬ್ಲಾಕ್ ಮತ್ತು ಪಂಚಾಯ್ತಿ ಮಟ್ಟದಲ್ಲಿ ನಿಯೋಜನೆಗೊಂಡ ಪ್ರಮುಖರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಶರ್ಫುದ್ದಿನ್, ಪ್ರಧಾನ ಕಾರ್ಯದರ್ಶಿ ಶಾಫಿ, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಪ್ರಮುಖರಾದ ಕಿರಣ್, ಜಯಪ್ರಕಾಶ್ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.