ಪೊನ್ನಂಪೇಟೆಯಲ್ಲಿ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣಾ ದಿನ : ಶಿಲಾ ಸ್ಮಾರಕ ಅನಾವರಣ

27/08/2020

ಪೊನ್ನಂಪೇಟೆ, ಆ.27: ಕನ್ನಡನಾಡಿನ ಅಪರೂಪದ ರಾಜಕಾರಣಿ, ಹಿರಿಯ ನ್ಯಾಯವಾದಿ ಮತ್ತು ಪ್ರಖರ ವಿಚಾರವಾದಿಯಾಗಿದ್ದ ಎ.ಕೆ. ಸುಬ್ಬಯ್ಯ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಥಮ ವರ್ಷದ ಸ್ಮರಣಾ ದಿನವನ್ನು ಆಚರಿಸಲಾಯಿತು.

ಸುಬ್ಬಯ್ಯನವರ ನೆಚ್ಚಿನ ತೋಟವಾಗಿದ್ದ ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದಲ್ಲಿರುವ ಕಲ್ಲುಗುಂಡಿ ಎಸ್ಟೇಟಿನ ತಮ್ಮ ಪಿತ್ರಾರ್ಜಿತ ಜಾಗದಲ್ಲಿನ ಅವರ ಪತ್ನಿ ಡಾಟಿ ಪೊನ್ನಮ್ಮ ಅವರ ಸಮಾಧಿ ಪಕ್ಕದಲ್ಲೇ ಇರುವ ಸುಬ್ಬಯ್ಯನವರ ಸಮಾಧಿಗೆ ನೂತನವಾಗಿ ನಿರ್ಮಿಸಿದ್ದ ಶಿಲಾ ಸ್ಮಾರಕವನ್ನು ಮೊದಲ ವರ್ಷದ ಸ್ಮರಣಾ ದಿನದಂದು ಅನಾವರಣ ಮಾಡಲಾಯಿತು.

ಸುಬ್ಬಯ್ಯನವರು ಅಗಲಿ ಒಂದು ವರ್ಷ ಕಳೆದಿದ್ದರೂ ಅವರ ಅಪಾರ ಸಂಖ್ಯೆಯ ಅಭಿಮಾನಿ ಬಳಗದಲ್ಲಿ ಮಡುಗಟ್ಟಿದ ದುಃಖ ಇನ್ನೂ ಆರಿರಲಿಲ್ಲ. ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ವಿಚಾರವಾದಿ, ಚಿಂತಕ ಒಡನಾಡಿಗಳು ತಮ್ಮ ನೆಚ್ಚಿನ ನಾಯಕನ ಸಮಾಧಿಗೆ ಪುಷ್ಪಮಾಲೆ ಅರ್ಪಿಸಿ ಅಂತಃಕರಣಪೂರ್ವಕವಾಗಿ ನಮಿಸಿದರು.

ಆರಂಭದಲ್ಲಿ ಸುಬ್ಬಯ್ಯನವರ ಮಕ್ಕಳು, ಸೊಸೆಯಂದಿರು ಹಾಗೂ ಕುಟುಂಬಸ್ಥರು ಸುಬ್ಬಯ್ಯನವರ ಶಿಲಾ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ನಮನ ಅರ್ಪಿಸಿದರು. ಬಳಿಕ ಹಿರಿಯ ವಿದ್ವಾಂಸರಾದ ಡಾ. ರಾಮಚಂದ್ರಪ್ಪ ಟಿ. ಬೇಗೂರ್ ಅವರು ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.

ಹಚ್ಚಹಸುರಿನ ಕಾಫಿ ತೋಟದ ನಡುವೆ ಇರುವ ಎ.ಕೆ. ಸುಬ್ಬಯ್ಯ ಅವರ ಸಮಾಧಿ ಬಳಿ ಬೆಳಿಗ್ಗೆಯಿಂದಲೇ ನೂರಾರು ಜನ ನೆರೆದು ಸುಬ್ಬಯ್ಯನವರ ವಿಚಾರಧಾರೆಗಳನ್ನು ಮೆಲುಕು ಹಾಕಿದರು. ಸುಬ್ಬಯ್ಯನವರ ಅಭಿಮಾನಿ ಬಳಗದ ಪ್ರೀತಿಯ ಭಾವುಕತೆ ಅವರು ತೀರಿಕೊಂಡ ದಿನವನ್ನು ನೆನಪಿಸುವಂತಿತ್ತು. ಅಷ್ಟೊಂದು ಪ್ರಮಾಣದಲ್ಲಿ ಅಭಿಮಾನಿ ಬಳಗದವರು ಸಮಾಧಿ ಬಳಿ ಜಮಾಯಿಸಿದ್ದರು.

ಸುಬ್ಬಯ್ಯನವರ ಪುತ್ರರಾದ ನರೇನ್ ಕಾರ್ಯಪ್ಪ, ರವಿ ಸೋಮಯ್ಯ, ದಿನು ಪೂವಪ್ಪ, ಪೊನ್ನಣ್ಣ ಮತ್ತು ಮುತ್ತಣ್ಣ ಸೇರಿ ಚರ್ಚಿಸಿ ಅವರ ಬದುಕಿನ ಉಸಿರಾಗಿದ್ದ ಜಾತ್ಯಾತೀತ ತತ್ವಗಳನ್ನು ಶಿಲಾ ಸ್ಮಾರಕದ ಮೇಲೆ ಕೆತ್ತಿಸಿದ್ದಾರೆ. ಸುಬ್ಬಯ್ಯನವರು ಅತೀವವಾಗಿ ಮೈಗೂಡಿಸಿಕೊಂಡಿದ್ದ ‘ಧೈರ್ಯ’, ‘ದೃಢ ನಂಬಿಕೆ’ ಮತ್ತು ‘ಸಹಾನುಭೂತಿ’ ಎಂಬ ಪದವನ್ನು ಶಿಲಾ ಸ್ಮಾರಕದ ಮುಂಭಾಗದಲ್ಲಿ ವಿಶೇಷವಾಗಿ ಕೆತ್ತಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿತ್ತು.

ಸುಬ್ಬಯ್ಯನವರು ಕೊಡಗಿಗೆ ಬಂದಾಗಲೆಲ್ಲಾ ಜನರನ್ನು ಭೇಟಿಯಾಗುತ್ತಿದ್ದ ಬೆಳ್ಳೂರಿನ ಅವರ ನಿವಾಸದ ಆವರಣದಲ್ಲಿ ಇಂದು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಮತ್ತು ಕೊಡಗಿನ ವಿವಿಧೆಡೆಯ ಅಭಿಮಾನಿಗಳು ತುಂಬಿದ್ದರೂ ಧಿರೋದತ್ತ ನಾಯಕನ ಅಗಲಿಕೆಯಿಂದ ಅವರ ನಿವಾಸ ‘ರಾಜನಿಲ್ಲದ ಅರಮನೆ’ಯಂತೆ ಬಾಸವಾಗುತ್ತಿತ್ತು.

ಮೊದಲ ವರ್ಷದ ಸ್ಮರಣಾ ದಿನದಂದು ಸಮಾಧಿ ಬಳಿ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸುತ್ತಿದ್ದ ಜನರನ್ನು ಸುಬ್ಬಯ್ಯ ಅವರ ಪುತ್ರರಾದ ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲರಾದ ಎ.ಎಸ್. ಪೊನ್ನಣ್ಣ, ಹಿರಿಯ ಮಗ ನರೇನ್ ಕಾರ್ಯಪ್ಪ, ಸೊಸೆಯಂದಿರಾದ ಚಂದಲೆ ಕಾರ್ಯಪ್ಪ, ಕಾಂಚನ ಪೊನ್ನಣ್ಣ, ಡಾ. ನಯನ ಸೋಮಯ್ಯ ಮೊದಲಾದವರು ಪ್ರೀತಿಯಿಂದ ಮಾತನಾಡಿಸಿ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸಂಚಾಲಕರಾದ ಕೆ. ಎನ್. ಅಶೋಕ್, ಹಿರಿಯ ವಿಚಾರವಾದಿ ಶಿವಸುಂದರ್, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ, ಕರ್ನಾಟಕ ಜನಶಕ್ತಿ ಸಂಘಟನೆಯ ಅನನ್ಯ ಶಿವಕುಮಾರ್, ಡಾ. ಶ್ರೀರಾಮಪ್ಪ, ಮೈಸೂರಿನ ಚಂದ್ರಶೇಖರ ತರಹುಣಿಸೆ, ಗೋಪಾಲ ಮಲ್ಲಿಕಾರ್ಜುನಯ್ಯ, ಮಂಡ್ಯದ ವಕೀಲ ಜಗನ್ನಾಥ್, ಹೈಕೋರ್ಟ್ ವಕೀಲರಾದ ಬಲ್ಲಚಂಡ ಬೆಳ್ಳಿಯಪ್ಪ, ಬ್ಲೂ ಡಾರ್ಟ್ ಸಂಸ್ಥೆಯ ಉಪಾಧ್ಯಕ್ಷರಾದ ಬಾಳೆಯಡ ಕಾಳಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕಿರಿಯಮಾಡ ಭೀಮಯ್ಯ, ಪೊಲೀಸ್ ಅಧಿಕಾರಿ ಗೋಪಾಲ್ ನಾಯಕ್, ಜಿ.ಪಂ. ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ, ಬಿ.ಎನ್. ಪ್ರತ್ಯು, ತಾ. ಪಂ. ಸದಸ್ಯರಾದ ಪಲ್ವಿನ್ ಪೂಣಚ್ಚ, ಹಿರಿಯ ಮುಖಂಡರಾದ ಚೆಕ್ಕೇರ ವಾಸು ಕುಟ್ಟಪ್ಪ, ಚಿರಿಯಪಂಡ ನಾಣಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಕಾಂಗ್ರೆಸ್ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ತೀತಿರ ಧರ್ಮಜ ಉತ್ತಪ್ಪ, ಆಪಟ್ಟಿರ ಟಾಟು ಮೊಣ್ಣಪ್ಪ, ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಕಡೇಮಾಡ ಕುಸುಮ ಜೋಯಪ್ಪ, ಚೊಟ್ಟೆಯಂಡಮಾಡ ವಿಶು, ಕೊಲ್ಲಿರ ಬೋಪಣ್ಣ, ಚೊಟ್ಟೆಯಂಡಮಾಡ ದಿನೇಶ್, ಚೇರಂಡ ಮೋಹನ್, ಕೇಚೆಟ್ಟೀರ ಹರೀಶ್, ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ.ಟಿ. ಅರಸು ನಂಜಪ್ಪ, ಕೇಚಮಾಡ ಶಿವ ನಾಚಪ್ಪ ಸೇರಿದಂತೆ ಅಭಿಮಾನಿಗಳು, ವಕೀಲರು ಕುಟುಂಬಸ್ಥರು ಮತ್ತು ಸುಬ್ಬಯ್ಯ ಅವರ ಬಂಧುವರ್ಗ ಪಾಲ್ಗೊಂಡಿದ್ದರು.