ತುಳುವೆರ ಜನಪದ ಕೂಟದಿಂದ ಜನಪದ ಪತ್ತಿನ ಸಹಕಾರ ಸಂಘ ಸ್ಥಾಪನೆ

04/09/2020

ಮಡಿಕೇರಿ ಸೆ.4 : ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕರ ಶ್ರೇಯೋಭಿವೃದ್ಧಿ ಹಾಗೂ ಆರ್ಥಿಕ ಸ್ವಾವಲಂಭನೆಯ ಉದ್ದೇಶದಿಂದ ಜನಪದ ಪತ್ತಿನ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಜಿಲ್ಲೆಯ ತುಳು ಭಾಷಿಕರು ಷೇರು ಮತ್ತು ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ತುಳುವೆರ ಜನಪದ ಕೂಟದ ಅಧ್ಯಕ್ಷ ಹಾಗೂ ಜನಪದ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ಶೇಖರ್ ಭಂಡಾರಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಸಹಕಾರ ಸಂಘ ರಚನೆ ಕುರಿತು ಚಿಂತನೆ ನಡೆಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಕೂಟದ ಕಾರ್ಯಚಟುವಟಿಕೆಗೆ ಹಿನ್ನಡೆಯಾಗಿತ್ತು. ಇದೀಗ ಮತ್ತೆ ಕಾರ್ಯೋನ್ಮುಖವಾಗಿದ್ದು, ಎಲ್ಲರ ಸಹಕಾರ ಅಗತ್ಯವೆಂದರು.
ಸಹಕಾರ ಸಂಘದ ಪ್ರಧಾನ ಕಚೇರಿಯನ್ನು ಗೋಣಿಕೊಪ್ಪದ ಟಾಸ್ ಬಿಲ್ಡಿಂಗ್‍ನಲ್ಲಿ ತೆರೆಯಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಷೇರು ಸಂಗ್ರಹ ಮಾಡಲಾಗುವುದು. ಪ್ರತಿ ಷೇರಿನ ಬೆಲೆ(ಪಾಲು) ಸಾವಿರ ರೂ. ಆಗಿದ್ದು, ಜಿಲ್ಲೆಯ ಎಲ್ಲಾ ತುಳು ಭಾಷಿಕರು ಷೇರು ಮತ್ತು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪತ್ತಿನ ಸಹಕಾರ ಸಂಘದಲ್ಲಿ ಕೇವಲ ತುಳು ಭಾಷಿಕರು ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಜಾತಿ, ಜನಾಂಗದವರು ಷೇರು ಮತ್ತು ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ. ಕೋವಿಡ್ ನಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಂಘದ ಮೂಲಕ ದುರ್ಬಲ ವರ್ಗದ ಮಂದಿಗೆ ಶಿಕ್ಷಣ, ಕೃಷಿ ಮತ್ತು ವಾಹನ ಸಾಲ ನೀಡಲು ಚಿಂತಿಸಲಾಗಿದೆ ಎಂದು ಶೇಖರ್ ಭಂಡಾರಿ ತಿಳಿಸಿದರು.
ತುಳುವೆರ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಿ.ಎಂ.ರವಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಒಂದೂವರೆ ಲಕ್ಷದಷ್ಟು ಮಂದಿ ತುಳು ಭಾಷಿಕರಿದ್ದು, 13 ಸಮುದಾಯದ ತುಳು ಭಾಷಿಕ ಪ್ರಮುಖರನ್ನು ಜನಪದ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರುಗಳನ್ನಾಗಿ ನೇಮಕ ಮಾಡಲಾಗಿದೆ ಎಂದರು. ಬಿಲ್ಲವ, ಮೊಗೇರ, ಭಂಟ, ಆದಿದ್ರಾವಿಡ, ಕುಲಾಲ, ವಿಶ್ವಕರ್ಮ ಭಂಡಾರಿ, ತುಳು ಬ್ರಾಹ್ಮಣ, ಪದಾರ್ಥಿ, ಗಾಣಿಗ, ಮರಾಟ-ಮರಾಠಿ, ಪರಿವಾರ ಭಂಟ ಜನಾಂಗದ ಪ್ರತಿನಿಧಿಗಳು ಸಂಘದ ಪ್ರವರ್ತಕರಾಗಿರುತ್ತಾರೆ.
ವಿರಾಜಪೇಟೆ ತಾಲ್ಲೂಕಿನಿಂದ 6, ಮಡಿಕೇರಿ ತಾಲ್ಲೂಕಿನಿಂದ 5 ಮತ್ತು ಸೋಮವಾರಪೇಟೆ ತಾಲ್ಲೂಕಿನಿಂದ ನಾಲ್ಕು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಸಹಕಾರ ಸಂಘದ ಅಧಿನಿಯಮದ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡÀ, ಹಿಂದುಳಿದ ವರ್ಗದ ಸಾಮಾನ್ಯ ಕ್ಷೇತ್ರಕ್ಕೆ ಪ್ರವರ್ತಕರ ನೇಮಕವಾಗಿದ್ದು, ಮೂವರು ಮಹಿಳಾ ಪ್ರವರ್ತಕರಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಜನಪದ ಪತ್ತಿನ ಸಹಕಾರ ಸಂಘದಲ್ಲಿ ಷೇರು ಮತ್ತು ಸದಸ್ಯತ್ವ ಪಡೆದು ಬ್ಯಾಂಕ್‍ನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ ರವಿ ತುಳು, ಮಾತ್ರವಲ್ಲದೆ ಎಲ್ಲಾ ಜಾತಿ, ಜನಾಂಗಗಳ ಮಂದಿ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಸಹಕಾರ ಸಂಘ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜನಪದ ಕೂಟದ ಗೌರವ ಸಲಹೆಗಾರ ಬಿ.ಬಿ.ಐತಪ್ಪ ರೈ, ಉಪಾಧ್ಯಕ್ಷ ಬಿ.ವೈ.ಆನಂದರಘು, ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹರೀಶ್ ಆಳ್ವ ಹಾಗೂ ಸಲಹೆಗಾರ ನಾಣಯ್ಯ ಉಪಸ್ಥಿತರಿದ್ದರು.