60 ವರ್ಷ ಮೀರಿದವರಿಗೆ ವೃದ್ಧಾಪ್ಯ ಪಿಂಚಣಿ

12/09/2020

ತುಮಕೂರು ಸೆ.12 : ಇನ್ನು ಮುಂದೆ 60 ವರ್ಷ ಮೀರಿದ ಎಲ್ಲರಿಗೂ ವೃದ್ಧಾಪ್ಯ ಪಿಂಚಣಿ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಇನ್ನು ಮುಂದೆ 60 ವರ್ಷ ಮೀರಿದವರು ಅರ್ಜಿ ಸಲ್ಲಿಸದೇ ಇದ್ದರೂ ಪಿಂಚಣಿ ಪಡೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 60 ವರ್ಷ ವಯೋಮಿತಿ ಮೀರಿದವರ ದಾಖಲೆಗಳು ನಮ್ಮಲ್ಲಿಯೇ ಲಭ್ಯವಿದ್ದು, 60 ವರ್ಷ ಮೀರಿದವರು ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು.
ಈ ದಿಸೆಯಲ್ಲಿ ಉಡುಪಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, 10 ಸಾವಿರ ಮಂದಿಗೆ ಈ ರೀತಿ ಪಿಂಚಣಿ ನೀಡಲಾಗಿದೆ ಎಂದರು.